ಜಿಲ್ಲೆ

ಮುಂಗಾರು ಬಿತ್ತನೆಗೆ ಭರದ ಸಿದ್ಧತೆ

Haveri

ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಭರದ ಸಿದ್ಧತೆ ನಡೆಸಿದ್ದಾರೆ. ಕೆಲವೆಡೆ ಬಿದ್ದ ಅಲ್ಪ ಮಳೆಗೆ ಬಿತ್ತನೆ ಆರಂಭಗೊಂಡಿದ್ದರೆ, ಇನ್ನು ಕೆಲವೆಡೆ ಬಿತ್ತನೆಗೆ ಭೂಮಿ ಸಜ್ಜುಗೊಳಿಸುವ ಕೆಲಸದಲ್ಲಿ ರೈತರು ನಿರತರಾಗಿದ್ದಾರೆ.

ಜಿಲ್ಲೆಯಲ್ಲಿ 3,30,639 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಮುಂಗಾರು ಬೆಳೆಗಳೇ ಪ್ರಧಾನವಾಗಿವೆ. ಹೀಗಾಗಿ, ಮುಂಗಾರು ಕೈಹಿಡಿದರೆ ರೈತರಿಗೆ ಅನುಕೂಲ. ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 800 ಮಿಮೀನಷ್ಟಿದ್ದು, ಮುಂಗಾರು ಹಂಗಾಮಿನಲ್ಲಿ 521.30 ಮಿಮೀನಷ್ಟು ವಾಡಿಕೆ ಮಳೆಯಿದೆ. ಪ್ರಸಕ್ತ ಸಾಲಿನಲ್ಲಿ ಮೇ ತಿಂಗಳಾಂತ್ಯಕ್ಕೆ ವಾಡಿಕೆಗಿಂತ ಉತ್ತಮ ಮಳೆಯಾಗಿದೆ. ಹೀಗಾಗಿ ರೈತರು ಮುಂಗಾರು ಬಿತ್ತನೆಯ ಸಂಭ್ರಮದಲ್ಲಿದ್ದಾರೆ. ಅದಕ್ಕಾಗಿ ಬೀಜ, ರಸಗೊಬ್ಬರ ಖರೀದಿಯತ್ತ ಮುಖಮಾಡಿದ್ದು, ಕೃಷಿ ಇಲಾಖೆ ಬೀಜ, ಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಪ್ರಸಕ್ತ ವರ್ಷದ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮೆಕ್ಕೆಜೋಳವೇ ಪ್ರಮುಖ ಬೆಳೆಯಾಗಿದೆ. 2,04,689 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಬಿಟಿ ಹತ್ತಿ 53,735 ಹೆಕ್ಟೇರ್, ಭತ್ತ 33,715, ಶೇಂಗಾ 19,519, ಸೋಯಾಬೀನ್ 7,517, ತೊಗರಿ 801, ಇತರೆ ಬೆಳೆಗಳನ್ನು 10,096 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಗುರಿ ನಿಗದಿಯಾಗಿದೆ. ಅದರಲ್ಲಿ ಈಗಾಗಲೇ ಸೋಯಾಬೀನ್ ಬಿತ್ತನೆ ಕಾರ್ಯ ಆರಂಭಗೊಂಡಿದೆ.

ಬೀಜದ ದಾಸ್ತಾನು ವಿವರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಮೆಕ್ಕೆಜೋಳ 12 ಸಾವಿರ ಕ್ವಿಂಟಾಲ್ ಬೀಜಕ್ಕೆ ಬೇಡಿಕೆಯಿದೆ. ಅದರಲ್ಲಿ 7,475 ಕ್ವಿಂಟಾಲ್ ಬೀಜ ದಾಸ್ತಾನಿದ್ದು, 2 ಸಾವಿರ ಕ್ವಿಂಟಾಲ್ ವಿತರಣೆಯಾಗಿದೆ. ಭತ್ತ 5 ಸಾವಿರ ಕ್ವಿಂಟಾಲ್ ಬೀಜಕ್ಕೆ ಬೇಡಿಕೆಯಿದ್ದು, 4,360 ಕ್ವಿಂಟಾಲ್ ಬೀಜ ಸಂಗ್ರಹವಿದೆ. 500 ಕ್ವಿಂಟಾಲ್ ವಿತರಣೆಯಾಗಿದೆ. ಶೇಂಗಾ 3,200 ಕ್ವಿಂಟಾಲ್ ಬೀಜಕ್ಕೆ ಬೇಡಿಕೆಯಿದ್ದು, 2,800 ಕ್ವಿಂಟಾಲ್ ಬೀಜ ದಾಸ್ತಾನಿದೆ. 1,050 ಕ್ವಿಂಟಾಲ್ ವಿತರಣೆಯಾಗಿದೆ. ಸೋಯಾಬೀನ್ 12 ಸಾವಿರ ಕ್ವಿಂಟಾಲ್ ಬೀಜಕ್ಕೆ ಬೇಡಿಕೆಯಿದ್ದು, 9,691 ಕ್ವಿಂಟಾಲ್ ಬೀಜ ಸಂಗ್ರಹವಿದೆ. 6,896 ಕ್ವಿಂಟಾಲ್ ವಿತರಣೆಯಾಗಿದೆ.

ರಸಗೊಬ್ಬರ ದಾಸ್ತಾನು: ಜಿಲ್ಲೆಯ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 19,202 ಟನ್ ರಸಗೊಬ್ಬರ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ. ಕಾಪು ದಾಸ್ತಾನಿನಡಿ ಯೂರಿಯಾ ದಾಸ್ತಾನನ್ನು ಕಳೆದ ಸಾಲಿನ 3 ಸಾವಿರ ಟನ್​ನಿಂದ 15,100 ಟನ್​ಗೆ ಹೆಚ್ಚಿಸಿ ಹಂಚಿಕೆ ಮಾಡಲಾಗುತ್ತಿದೆ. ಅಲ್ಲದೆ, ಮುಂಗಾರು ಬಿತ್ತನೆಗೆ ಪ್ರಮುಖವಾಗಿರುವ ಡಿಎಪಿ ಗೊಬ್ಬರ 15,160 ಟನ್ ಪೂರೈಕೆಯಾಗಿದ್ದು, ಈವರೆಗೆ 5,745 ಟನ್ ವಿತರಣೆಯಾಗಿದೆ. ಇನ್ನು 9,415 ಟನ್ ದಾಸ್ತಾನಿದೆ. ಎಂಒಪಿ 3,291 ಟನ್ ಪೂರೈಕೆಯಾಗಿದ್ದು, ಈವರೆಗೆ 684 ಟನ್ ವಿತರಣೆಯಾಗಿದೆ. 2,607 ಟನ್ ದಾಸ್ತಾನಿದೆ. ಕಾಂಪ್ಲೆಕ್ಸ್ 23,455 ಟನ್ ಪೂರೈಕೆಯಾಗಿದ್ದು, 3,890 ಟನ್ ವಿತರಣೆಯಾಗಿದೆ. 19,565 ಟನ್ ಸ್ಟಾಕ್ ಇದೆ.

ಮಳೆಯ ವಿವರ: ಮೇ ತಿಂಗಳಲ್ಲಿ ಜಿಲ್ಲೆಯ ಹಾವೇರಿ ಹಾಗೂ ರಾಣೆಬೆನ್ನೂರ ತಾಲೂಕು ಹೊರತುಪಡಿಸಿ ಉಳಿದ ಆರು ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಹಾವೇರಿ ತಾಲೂಕಿನಲ್ಲಿ ವಾಡಿಕೆ ಮಳೆ 72.4 ಮಿಮೀ ನಷ್ಟಿದೆ. ತಿಂಗಳ ಅಂತ್ಯಕ್ಕೆ 49 ಮಿಮೀನಷ್ಟು ಮಳೆಯಾಗಿದೆ. ರಾಣೆಬೆನ್ನೂರ ವಾಡಿಕೆ ಮಳೆ 82.3 ಮಿಮೀನಷ್ಟಿದ್ದು, ತಿಂಗಳ ಅಂತ್ಯಕ್ಕೆ 74 ಮಿಮೀ ಮಳೆಯಾಗಿದೆ. ಉಳಿದೆಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.

ಜಿಲ್ಲೆಯಲ್ಲಿ ಬಿತ್ತನೆ ಬೀಜಗಳನ್ನು 19 ರೈತ ಸಂಪರ್ಕ ಕೇಂದ್ರಗಳು ಹಾಗೂ 34 ಹೆಚ್ಚುವರಿ ಕೇಂದ್ರಗಳು ಸೇರಿ ಒಟ್ಟು 53 ಬೀಜ ಮಾರಾಟ ಕೇಂದ್ರಗಳಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಕರೊನಾ ಭೀತಿಯಿರುವುದರಿಂದ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಬೀಜ, ಗೊಬ್ಬರ ಖರೀದಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಯಾವುದೇ ಬೀಜ ಹಾಗೂ ರಸಗೊಬ್ಬರದ ಕೊರತೆಯಿಲ್ಲ.| ಬಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ಹಾವೇರಿ