ಜಿಲ್ಲೆ

ಬೆಳೆ ರಕ್ಷಣೆಗೆ ರೈತರ ಪಡಿಪಾಟಲು

ವೀರೇಶ ಸೌದ್ರಿ

ಮುಳಗುಂದ: ಮಳೆ ಕೊರತೆಯಿಂದಾಗಿ ಬೆಳೆಗಳು ಒಣಗುತ್ತಿವೆ. ಬೆಳೆ ರಕ್ಷಣೆಗೆ ರೈತ ಸಮುದಾಯ ಹರಸಾಹಸ ಪಡುತ್ತಿದ್ದು ಟ್ಯಾಂಕರ್ ನೀರಿನ ಮೊರೆ ಹೋಗಿದೆ.
ಜುಲೈ ಆರಂಭದಲ್ಲಿ ಸುರಿದ ಅಲ್ಪ ಮಳೆಯಿಂದಾಗಿ ರೈತರು ಎಕರೆಗೆ 10 ರಿಂದ 15 ಸಾವಿರ ರೂ. ಖರ್ಚು ಮಾಡಿ ಭೂಮಿಗೆ ಬೀಜ ಹಾಕಿದ್ದಾರೆ. ಬೆಳೆದು ನಿಂತ ಬೆಳೆಗೆ ಈಗ ನೀರಿನ ಅವಶ್ಯಕತೆಯಿದ್ದು ಮಳೆ ಬಾರದ ಕಾರಣ ಒಣಗುತ್ತಿವೆ.

ಒಣ ಬೇಸಾಯದ ಭೂಮಿಯಲ್ಲಿ ಬಿತ್ತಿದ ಬೆಳೆಗಳು ಮಳೆ ಇಲ್ಲದೆ ಇಳುವರಿ ಕುಂಠಿತವಾಗಿವೆ. ಮಸಾರಿ, ಕೆಂಪು ಮಿಶ್ರಿತ ಭೂಮಿಯಲ್ಲಿ ಅಲ್ಪ ಮಳೆಗೆ ಬಿತ್ತಿದ ಮೆಣಸಿನಕಾಯಿ, ಬಳ್ಳಿ ಶೇಂಗಾ, ಗೋವಿನಜೋಳ ಇತರ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿದ್ದು ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆಗಳನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಎಕರೆಗೆ 20 ರಿಂದ 25 ಟ್ಯಾಂಕರ್ ನೀರು: ಒಂದು ಎಕರೆ ಬೆಳೆಗೆ ನೀರುಣಿಸಲು 20 ರಿಂದ 25 ಟ್ಯಾಂಕರ್ ನೀರು ಬೇಕಾಗುತ್ತದೆ. ಸ್ವಂತ ಟ್ರ್ಯಾಕ್ಟರ್, ಟ್ಯಾಂಕರ್ ಹೊಂದಿದ ರೈತರು ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ. ಕೆಲ ರೈತರು ಟ್ಯಾಂಕರ್‌ಗೆ ಬಾಡಿಗೆ ನೀಡಿ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಟ್ಯಾಂಕರ್ ಮೂಲಕ ನೀರು ಹಾಯಿಸಿದರೂ ಮಳೆ ಸುರಿದಂತೆ ಆಗುವುದಿಲ್ಲ, ಇಳುವರಿಯೂ ಅಷ್ಟಾಗಿ ಬರುವುದಿಲ್ಲ. ಬೀಜ, ಗೊಬ್ಬರ ಸೇರಿದಂತೆ ಬಿತ್ತನೆಗಾಗಿ ಈಗಾಗಲೇ ಹತ್ತಾರು ಸಾವಿರ ರೂ. ಖರ್ಚು ಮಾಡಿದ್ದೇವೆ. ಆದರೀಗ ಮತ್ತೆ ಟ್ಯಾಂಕರ್ ಮೂಲಕ ನೀರು ಹಾಯಿಸಿದರೆ ಆದಾಯಕ್ಕಿಂತ ಖರ್ಚೇ ಹೆಚ್ಚಾಗುತ್ತದೆ ಎನ್ನುತ್ತಾರೆ ರೈತರು.

ಮಳೆ ಕೊರತೆಯಿಂದ ರೈತ ಸಮುದಾಯವಷ್ಟೇ ಅಲ್ಲದೆ ಕೃಷಿ ಕಾರ್ಮಿಕರಿಗೂ ಹೊಲಗಳಲ್ಲಿ ಮಾಡಲು ಕೆಲಸವಿಲ್ಲದಂತಾಗಿದೆ. ಉದ್ಯೋಗ ಅರಸಿ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೂ ಮೇವಿನ ಕೊರತೆ ಉಂಟಾಗಿದೆ. ಸಕಾಲಕ್ಕೆ ಮಳೆಯಾಗದಿದ್ದರೆ ದನ-ಕರುಗಳನ್ನು ಸಾಕುವುದು ಕಷ್ಟ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತರು.