ಮೈಸೂರು: ಈಗಲೂ ಪರ್ಯಾಯ ಶಕ್ತಿಯಾಗಬಲ್ಲ ತಾಕತ್ತು ಇರುವುದು ರೈತ ಸಂಘಟನೆಗೆ ಮಾತ್ರ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಸ್ಥಾಪಕ ಸದಸ್ಯ ಪ್ರೊ.ಕೆ.ಸಿ. ಬಸವರಾಜು ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಹಯೋಗದಲ್ಲಿ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಯು.ಜಿ.ಮೋಹನಕುಮಾರ್ ಆರಾಧ್ಯ ಅವರ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲಾ ಪ್ರದರ್ಶನ ಹಾಗೂ ಅನ್ನದಾತರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿರು ಸಮೃದ್ಧಿಯ ಸಂಕೇತ. ಹಸಿರು ಬದಲಾವಣೆಯ ಸಂಕೇತ. 70ರ ದಶಕದ ದಲಿತ, 80ರ ದಶಕದ ರೈತ ಹಾಗೂ ಭಾಷಾ ಚಳವಳಿಯಿಂದಾಗಿ ರಾಜ್ಯದಲ್ಲಿ ಸರ್ಕಾರಗಳೇ ಉರುಳಿವೆ. 90ರ ದಶಕದಲ್ಲಿ ರೈತರು ಬಂದರೆ ವಿಧಾನಸೌಧ ಗಡಗಡ ನಡುಗುತ್ತಿತ್ತು. ಆದರೆ ಈಗ ಯಾರ‌್ಯಾರೋ ಹಸಿರು ಶಾಲು ಹಾಕಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಹಸಿದವರಿಗೆ ಮಾತ್ರ ಅನ್ನ ಹಾಗೂ ಅನ್ನದಾತರ ಬೆಲೆ ಗೊತ್ತಿರುತ್ತದೆ. ಅನ್ನದಾತ ಎಷ್ಟೇ ಕಷ್ಟ ಇರಲಿ ಎಲ್ಲರಿಗೂ ಅನ್ನವನ್ನು ಬೆಳೆದುಕೊಡುತ್ತಾನೆ. ಆತ ಇಲ್ಲದಿದ್ದಲ್ಲಿ ಹಸಿವು ನೀಗಿಸಲಾಗದು. ಹೀಗಾಗಿ ರೈತರಿಗೆ ಎಲ್ಲ ವರ್ಗದ ಜನ ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು.
ರೈತರಾದ ಹುಣಸೂರು ತಾಲೂಕಿನ ಮನುಗನಹಳ್ಳಿಯ ಬಿ. ವೀರಭದ್ರಪ್ಪ, ಹನುಮಂತಪುರದ ವಸಂತ, ನಂಜನಗೂಡು ತಾಲೂಕಿನ ಕಪ್ಪಸೋಗೆಯ ಮಹೇಂದ್ರ, ಮುದ್ದಹಳ್ಳಿಯ ಕುಮಾರಸ್ವಾಮಿ, ಚಿಕ್ಕಸ್ವಾಮಿ, ತಿ.ನರಸೀಪುರ ತಾಲೂಕಿನ ಅತ್ತಹಳ್ಳಿಯ ದೇವರಾಜ್, ಹುಣಸೂರು ತಾಲೂಕಿನ ಹೊಸೂರು ಕುಮಾರ್, ಮಂಜು ಕಿರಣ್, ಕುಳ್ಳೇಗೌಡ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಮಡಿವಾಳ ಸಮಾಜದ ಮುಖಂಡ ರವಿನಂದನ್, ಶೋಭಾರಾಣಿ, ಶಿ. ಕುಮಾರಸ್ವಾಮಿ, ಮುಖ್ಯ ಶಿಕ್ಷಕಿ ಪವಿತ್ರಾ, ಮುಕ್ತಕ ಕವಿ ಮುತ್ತುಸ್ವಾಮಿ, ಕಲಾವಿದ ಯು,ಜಿ. ಮೋಹನಕುಮಾರ್ ಆರಾಧ್ಯ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಆಲನಹಳ್ಳಿ ಶಾಶ್ವತ ಸೇವಾ ಸ್ಕೂಲ್ ಕಾರ್ಯದರ್ಶಿ ಎಂ.ಆರ್. ಚೌದರಿ , ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಪಾಲ್ಗೊಂಡಿದ್ದರು.