ಕೋಲಾರ : ಜಿಲ್ಲಾದ್ಯಂತ ಅವೈಜ್ಞಾನಿಕ ಅಂಡರ್‌ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಕೇರಳ ಮಾದರಿಯಲ್ಲಿ ತರಕಾರಿಗಳಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಗುರುವಾರ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ರೈತ ಸಂಘದ ಕಾರ್ಯಕರ್ತರನ್ನು ರೈಲ್ವೆ ಪೊಲೀಸರು ತಡೆದರು.
ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ರೈಲು ನಿಲ್ದಾಣಕ್ಕೆ ತರಕಾರಿ ಸಮೇತ ಮುತ್ತಿಗೆ ಹಾಕಲು ಆಗಮಿಸುತ್ತಿದ್ದಂತೆ ಆವರಣದಲ್ಲಿ ರೈಲ್ವೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಬ್ಯಾರಿಕೇಡ್ ತಳ್ಳಿ ಒಳಪ್ರವೇಶಿಸಲು ಪ್ರಯತ್ನಿಸಿದರು. ಪೊಲೀಸರು ಅವಕಾಶ ನೀಡದಿದ್ದಾಗ ಕೆಲ ಕಾಲ ಪರಸ್ಪರ ತಳ್ಳಾಟ, ನೂಕಲಾಟದೊಂದಿಗೆ ಮಾತಿನ ಚಕಮಕಿ ನಡೆಯಿತು. ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ ಸಿಗದಿದ್ದಾಗ ಆವರಣದ ಹೊರಗೇ ಪ್ರತಿಭಟನೆ ವ್ಯಕ್ತಪಡಿಸಿದರು.
ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ನೂರಾರು ಕೋಟಿ ರೂ. ಖರ್ಚು ಮಾಡಿ ರೈಲ್ವೆ ಇಲಾಖೆಯಿಂದ ನಿರ್ಮಿಸಿರುವ ಅಂಡರ್‌ಪಾಸ್‌ಗಳು ಅವೈಜ್ಞಾನಿಕವಾಗಿದ್ದು, ಮಳೆ ಬಿದ್ದರೆ ಕೆರೆ-ಕುಂಟೆಗಳಾಗಿ ಮಾರ್ಪಟ್ಟು ಜನರ ಸಂಪರ್ಕ ಕಡಿತಗೊಳ್ಳುತ್ತಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಬೆಳೆಗಳಿಗೆ ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯ ಬಂದಿಲ್ಲ. ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರ ಹಿತ ಕಾಯುವಲ್ಲಿ ವಿಫಲವಾಗಿವೆ. ರೈತರ ಮೇಲೆ ಕಾಳಜಿ ಇದ್ದರೆ ಕೂಡಲೇ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ಬೆಳೆಗಳಿಗೆ ಬೆಲೆ ನಿಗದಿ ಮಾಡಲಿ ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಭಂಗವಾದಿ ನಾಗರಾಜಗೌಡ, ಶ್ರೀನಿವಾಸಪುರ ಅಧ್ಯಕ್ಷ ತೇರ‌್ನಹಳ್ಳಿ ಆಂಜಿನಪ್ಪ, ಮುಖಂಡರಾದ ಚಾಂದ್‌ಪಾಷಾ, ಮಂಗಸಂದ್ರ ತಿಮ್ಮಣ್ಣ, ಜಮೀರ್‌ಪಾಷಾ, ಶೇಕ್ ಬಾಬಜಾನ್, ಕಿರಣ್, ಜಾವೇದ್, ಜಮೀರ್, ಅಸ್ಸೀಮ್, ಶಮೀರ್, ನಸ್ಸೀಮ್, ಜಾಕೀರ್, ಮಾಲೂರು ಅಧ್ಯಕ್ಷ ವೆಂಕಟೇಶ್, ಬಂಗಾರಪೇಟೆ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ ಇತರರು ಹಾಜರಿದ್ದರು.