ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಉಡುಪಿ ಜಿಲ್ಲೆಯ ಪಡುಬಿದಿರೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಎಳಿಂಜೆ, ನಿಡ್ಡೋಡಿ, ಮುಚ್ಚೂರು, ಎಡಪದವು ಮಂಗಳೂರು, ಮೂಡುಬಿದಿರೆ ಸೇರಿದಂತೆ ಬಂಟ್ವಾಳ, ಪುತ್ತೂರು ತಾಲೂಕು ಮೂಲಕ ಕೇರಳಕ್ಕೆ ಹಾದು ಹೋಗಲಿರುವ 440 ಕಿಲೋ ವ್ಯಾಟ್ ವಿದ್ಯುತ್ ಲೈನ್ ಕಾಮಗಾರಿಗೆ ಕೃಷಿಕರು ವಿರೋಧ ವ್ಯಕ್ತಪಡಿಸಿದ್ದು, ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ ಪ್ರತಿಭಟನೆ ಎಚ್ಚರಿಕೆ ನೀಡಿದೆ.
ಸಂಘದ ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಪಡುಬಿದ್ರಿಯ ಕಂಪನಿಯ ಗುತ್ತಿಗೆದಾರರು, ರೈತರ ಕೃಷಿ ಭೂಮಿಯನ್ನು ಪೊಲೀಸ್ ಬಲ ಬಳಸಿಕೊಂಡು ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಕೃಷಿ ಭೂಮಿಗೆ ತೊಂದರೆಯಾಗುವ ರೀತಿ ವಿದ್ಯುತ್ ಟವರ್‌ಗಳನ್ನು ಅಳವಡಿಸಿ ತೊಂದರೆಯಾಗುವ ರೀತಿ ಕಾಮಗಾರಿ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಲವಂತವಾಗಿ ವಿದ್ಯುತ್ ಟವರ್ ಅಳವಡಿಸಲು ಮುಂದಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮೂಡುಬಿದಿರೆ ತಾಲೂಕಿನ ಅಶ್ವಥಪುರ, ನಿಡ್ಡೋಡಿ ಮುಂತಾದ ಪ್ರದೇಶಗಳಲ್ಲಿ ಕೃಷಿಕರಿಗೆ ಆಮಿಷ ಒಡ್ಡಿ ಫಲವತ್ತಾದ ಅಡಕೆ ಗಿಡಗಳನ್ನು ಕಡಿಯಲು ಪ್ರೇರೆಪಿಸಿರುವುದಾಗಿ ಆರೋಪಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಂಡು ತುಳುನಾಡಿನ ಕೃಷಿ ಭೂಮಿಯನ್ನು ಉಳಿಸಿಕೊಡಬೇಕೆಂದು ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿಸೋಜ ಆಗ್ರಹಿಸಿದರು.
ಏಳಿಂಜೆ ಹೋರಾಟ ಸಮಿತಿಯ ಸುಕೇಶ್ಚಂದ್ರ ಶೆಟ್ಟಿ, ನಡಿಕಂಬಳಗುತ್ತು ಶ್ರೇಯಸ್ ರಾಜ್ ಶೆಟ್ಟಿ ಇದ್ದರು.