ವಿಜಯಪುರದ ಗೃಹ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರೈತರೊಂದಿಗೆ ಸಚಿವ ಎಂ.ಬಿ. ಪಾಟೀಲ ಚರ್ಚೆ ನಡೆಸಿದರು. ವಿಧಾನ ಪರಿಷತ್​ ಸದಸ್ಯ ಸುನೀಲಗೌಡ ಪಾಟೀಲ, ಬಸವರಾಜ ಪಾಂಡೆಗಾವಿ, ವಿಠಲ ಚವಳಚಿ ಮತ್ತಿತರರಿದ್ದಾರೆ. 
ಜಿಲ್ಲೆ

ರೈತರಲ್ಲಿ ಆತಂಕ ಬೇಡ

ವಿಜಯಪುರ: ಅನಗತ್ಯವಾಗಿ ಯಾವುದೇ ಖಾಸಗಿ ಆಸ್ತಿ ಅಥವಾ ಜಮೀನುಗಳು ವಕ್ಫ್​ ಹೆಸರಿನಲ್ಲಿ ದಾಖಲಾಗುವುದಿಲ್ಲ. ವಕ್ಫ್​ ಆಸ್ತಿ ಎಂದು ನೋಟಿಸ್​ ಬಂದಿರುವ ಹಿನ್ನೆಲೆಯಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಹೊನವಾಡ ಕೆಲವು ಜಮೀನುಗಳನ್ನು ವಕ್ಫ್​ ಆಸ್ತಿ ಎಂದು ನೋಟಿಸ್​ ಜಾರಿ ಮಾಡುತ್ತಾರೆ ಎಂಬ ಆತಂಕದ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಿದ ಹೊನವಾಡದ ಕೆಲವು ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ವಿಷಯ ತಿಳಿಸಿದ ಸಚಿವರು, ವಕ್ಫ್​ ಹೆಸರಿನಲ್ಲಿ ಯಾವುದೇ ನೋಟಿಸ್​ ಪಡೆದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಈಗಾಗಲೇ, ಜಿಲ್ಲಾಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇನೆ.

ಮುಂದಿನ ವಾರ ಜಿಲ್ಲಾ ಮಟ್ಟದ ಸಭೆ ನಡೆಸಿ, ಕೂಲಂಕುಷವಾಗಿ ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ಜನರು ಅನಗತ್ಯವಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದರು.

ವಕ್ಫ್​ ನೋಟಿಸ್​ ಮತ್ತು ಸಂಬಂಧಿತ ಆಸ್ತಿಗಳ ಕುರಿತು ಸಂಪೂರ್ಣ ವಿವರಗಳನ್ನು ಮುಂದಿನ ಸಭೆಯಲ್ಲಿ ಒದಗಿಸುವಂತೆ ತಹಸೀಲ್ದಾರ್​ ಪ್ರಶಾಂತ ಚನಗೊಂಡ ಅವರಿಗೆ ಸಚಿವರು ಸೂಚನೆ ನೀಡಿದರು.

ಹೊನವಾಡದ ರೈತರು ಮಾತನಾಡಿ, ನಾಲ್ಕೆದು ತಲೆಮಾರಿನಿಂದ ಹೊನವಾಡದಲ್ಲಿ ಸಾಗುವಳಿ ಮಾಡುತ್ತ ಬಂದಿರುವ ನಾವು, ನಮ್ಮ ಕಬ್ಜೆಯಲ್ಲಿರುವ 89 ಸರ್ವೇಗಳ ಜಮೀನುಗಳ 1200 ಎಕರೆ ಪ್ರದೇಶ ವಕ್ಫ್​ ಆಸ್ತಿ ಎಂದು ಜಿಲ್ಲಾ ವಕ್ಫ್​ ಸಂಸ್ಥೆ ಹೇಳುತ್ತಿದೆ. ಸಚಿವರು ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದರು.

ವಿಪ ಸದಸ್ಯ ಸುನೀಲಗೌಡ ಪಾಟೀಲ, ಬಸವರಾಜ ಪಾಂಡೆಗಾವಿ, ವಿಠಲ ಚವಳಚಿ, ಭೀಮು ದೇವನಾಯಕ, ಮಹಾದೇವ ಜಾಧವ, ಬಾಪು ಮೊಳೆ, ಭೀರಪ್ಪ ಪಾಂಡೆಗಾವಿ, ವಿಠಲ ಗಡದಿ, ಧರೇಪ್ಪ ತೊದಲಬಾಗಿ, ರಮೇಶ ನಾಟಿಕಾರ, ಮುತ್ತು ಹಿರೇಮಠ, ರವಿ ಟಕ್ಕಳಕಿ, ಲಕ್ಷ$್ಮಣ ಕಾತ್ರಾಳ, ಸಾಬು ಕಾತ್ರಾಳ, ಸಚಿನ ಮಾನೆ, ಗುರುಸಿದ್ದ ಗೊಟ್ಯಾಳ, ಮಂಜು ಗೊಳಚಿ ಮತ್ತಿತರರಿದ್ದರು.