ಯಲ್ಲಾಪುರ: ಎಲೆಚುಕ್ಕಿ ರೋಗ ಹೊಸದಾಗಿ ಬಂದ ರೋಗ ಅಲ್ಲ. ಇದರಿಂದ ರೈತರು ಧೃತಿಗೆಡುವ ಅಗತ್ಯ ಇಲ್ಲ. ರೋಗದ ಬಗೆಗೆ ಜಾಗೃತಿ ಅಗತ್ಯ ಎಂದು ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಪಟ್ಟಣದ ಅಡಕೆ ಭವನದಲ್ಲಿ ಜಿ.ಪಂ., ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು, ತೋಟಗಾರಿಕೆ ಇಲಾಖೆ, ಆತ್ಮಾಯೋಜನೆ ಆಶ್ರಯದಲ್ಲಿ ಅಡಕೆ ಎಲೆಚುಕ್ಕಿ ರೋಗದ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬಿಸಿಲಿನಲ್ಲಿ ಹೆಚ್ಚಾಗಿ ಕಾಯ್ದ ತೋಟಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ. ಸೊಪ್ಪು, ದರಕು ಮುಚ್ಚಿದ ತೋಟಗಳಲ್ಲಿ ಎಲೆ ಚುಕ್ಕಿ ರೋಗ ವಿರಳವಾಗಿ ಕಾಣಿಸಿಕೊಂಡಿದೆ ಎಂದರು.
ರೈತ ಮುಖಂಡ ಪಿ.ಜಿ.ಭಟ್ಟ ಬರಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತಿಯಾದ ಉಷ್ಣಾಂಶ, ಮಳೆಯ ಪೂರ್ವದಲ್ಲಿ ಮಳೆ ಕೊರತೆಯಿಂದ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ. ಎಲೆಚುಕ್ಕಿ ರೋಗದ ಬಗೆಗೆ ತೋಟಿಗರಲ್ಲಿ ಸಾಮೂಹಿಕ ಜಾಗೃತಿ ಅಗತ್ಯ ಎಂದರು.
ತಜ್ಞರಾದ ಡಾ.ಬಿ.ಪಿ.ಸತೀಶ, ವಿನಾಯಕ ಹೆಗಡೆ, ವಿ.ಎಂ.ಹೆಗಡೆ ಎಲೆ ಚುಕ್ಕೆ ರೋಗದ ಹತೋಟಿಯ ಕುರಿತಂತೆ ರೈತರಿಗೆ ಮಾಹಿತಿ ನೀಡಿ, ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕೃಷಿ ಇಲಾಖೆಯ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯಕ, ಆತ್ಮಾ ಯೋಜನೆಯ ಸಂಯೋಜಕ ಎಂ.ಜಿ.ಭಟ್ ಇತರರಿದ್ದರು.