ಜಿಲ್ಲೆ

ಜಿಕೆವಿಕೆಯಲ್ಲಿ ರೈತಸಂತೆ: ಸೊಪ್ಪು-ತರಕಾರಿ ಖರೀದಿಗೆ ಮುಗಿಬಿದ್ದ ಗೃಹಿಣಿಯರು

ಬೆಂಗಳೂರು: ತಾಜಾ ಸೊಪ್ಪು, ತರಕಾರಿ, ಕೈಗೆಟಕುವ ದರದಲ್ಲಿ ಹಣ್ಣುಗಳನ್ನು ಹೆಚ್ಚಿನ ಸಂಖ್ಯೆಯ ಗೃಹಿಣಿಯರು ಮುಗಿಬಿದ್ದು ಖರೀದಿಸಿದರು. ಜತೆಗೆ ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳನ್ನೂ ಸಿಟಿ ಜನ ಖರೀದಿ ಭರಾಟೆಯಲ್ಲಿ ತೊಡಗಿದ್ದ ದೃಶ್ಯ ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಆಯೋಜಿಸಿದ್ದ ರೈತ ಸಂತೆಯಲ್ಲಿ ಕಂಡುಬಂದಿತು.

ತಿಂಗಳ ನಾಲ್ಕನೇ ಶನಿವಾರ ಜಿಕೆವಿಕೆಯಲ್ಲಿ ಆಯೋಜಿಸಿತ್ತಿರುವ ರೈತ ಸಂತೆಗೆ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದಾರೆ. ರೈತರಿಂದ ಗ್ರಾಹಕರಿಗೆ ನೇರ ಮಾರಾಟದ ವ್ಯವಸ್ಥೆ ಇರುವುದರಿಂದ ಮತ್ತು ಕೈಗೆಟಕುವ ದರದಲ್ಲಿ ಹಣ್ಣು-ತರಕಾರಿ ಲಭ್ಯವಾಗುವುದರಿಂದ ನಾಗರಿಕರಿಗೆ ಸಂತೆಯು ಹೊಸ ಖರೀದಿ ಸ್ಥಳವಾಗಿ ಮಾರ್ಪಡುತ್ತಿದೆ.

ಈ ಶನಿವಾರವೂ ಯಲಹಂಕ, ಹೆಬ್ಬಾಳ, ಕಲ್ಯಾಣನಗರ, ಜಾಲಹಳ್ಳಿ ಸೇರಿ ನಗರದ ವಿವಿಧ ಭಾಗಗಳಿಂದ ನೂರಾರು ಜನರು ರೈತಸಂತೆಗೆ ಆಗಮಿಸಿದ್ದರು. ರೈತರ ಜತೆಗೆ ರೈತ ಉತ್ಪಾದಕ ಸಂಸ್ಥೆ (ಎಫ್​ಪಿಒ) ಹಾಗೂ ಸ್ವ ಸಹಾಯ ಸಂಘಗಳು ಉತ್ಪಾದಿಸಿರುವ ಆಹಾರ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿತ್ತು. ವಿವಿಧ ಬಗೆಯ ಕೃಷಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗುವುದರಿಂದ ಜನರು ದೂರದ ಸ್ಥಳಗಳಿಂದ ಆಗಮಿಸಿ ಹಣ್ಣು-ತರಕಾರಿ ಮತ್ತು ದಿನಸಿಯನ್ನು ಖರೀದಿಸಿದರು. ನುಗ್ಗೆಸೊಪ್ಪು, ನೆಲ್ಲಿಕಾಯಿ, ಕವಳಿಕಾಯಿ, ಬಟರ್ ಫ್ರೂಟ್, ಡ್ರ್ಯಾಗನ್ ಫ್ರೂಟ್, ರಾಜಮುಡಿ ಅಕ್ಕಿ, ಮಿಲೆಟ್ ಮಾಲ್ಟ್, ಅಡುಗೆಗೆ ಬಳಸುವ ವಿವಿಧ ಮಸಾಲ ಪದಾರ್ಧಗಳು ಹೆಚ್ಚು ಬಿಕರಿಯಾದವು.

ಈ ವೇಳೆ ಕೃಷಿ ವಿವಿಯ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ವೈ.ಎನ್.ಶಿವಲಿಂಗಯ್ಯ ಮತ್ತಿತರರಿದ್ದರು.

ಜಿಕೆವಿಕೆ ಕ್ಯಾಂಪಸ್‌ನಲ್ಲಿ ಪ್ರತಿ ತಿಂಗಳೂ ನಡೆಸುತ್ತಿರುವ ರೈತಸಂತೆಗೆ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಒಂದೇ ಸ್ಥಳದಲ್ಲಿ ವೈವಿಧ್ಯಮಯ ಉತ್ಪನ್ನಗಳು ಲಭ್ಯವಾಗುವುದರಿಂದ ಖರೀದಿ ಹೆಚ್ಚಿದೆ. ರೈತರು-ಗ್ರಾಹಕರ ನಡುವೆ ಮಧ್ಯವರ್ತಿಗೆ ಅವಕಾಶ ಇಲ್ಲದ ಕಾರಣ ಕೈಗೆಟಕುವ ದರದಲ್ಲಿ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.

- ಡಾ. ಎಸ್.ವಿ.ಸುರೇಶ್, ಬೆಂಗಳೂರು ಕೃಷಿ ವಿವಿಯ ಕುಲಪತಿ