ಹುಣಸೂರು: ರಾಜ್ಯ ಬಜೆಟ್‌ನಲ್ಲಿ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ 5 ಲಕ್ಷ ರೂ. ಗಳವರೆಗೆ ರೈತರ ಸಾಲ ಮನ್ನಾ ಮಾಡಬೇಕೆಂದು ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಆಗ್ರಹಿಸಿದ್ದಾರೆ.
ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಯದುಗಿರೀಶ್ ಅವರಿಗೆ ಈ ಕುರಿತು ಗುರುವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತಂದಿರುವುದು ಒಂದೆಡೆಯಾದರೆ, ರಾಜ್ಯದ ರೈತರ ಭರವಸೆ ಹುಸಿಯಾಗಿದ್ದು ರೈತರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಏರುತ್ತಿರುವ ರಸಗೊಬ್ಬರ ಬೆಲೆಯೊಂದಿಗೆ ಈ ಬಾರಿಯ ಅತಿವೃಷ್ಟಿ, ಅನಾವೃಷ್ಟಿಯಿಂದ ಇನ್ನು ಸಹ ರೈತರು ಚೇತರಿಸಿಕೊಂಡಿಲ್ಲ. ಇದರೊಂದಿಗೆ ಭತ್ತ ಹಾಗೂ ಶುಂಠಿ ಬೆಳೆಯ ಧಾರಣೆ ಕುಸಿತದಿಂದಾಗಿ ರೈತರನ್ನು ಇನ್ನೂ ಆತಂಕಕ್ಕೆ ದೂಡಿದೆ.
ಕರ್ನಾಟಕ ರಾಜ್ಯದ ಸಹಕಾರ ಬ್ಯಾಂಕುಗಳಲ್ಲಿ ಸುಮಾರು 22 ಲಕ್ಷ ರೈತರು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 28 ಲಕ್ಷ ರೈತರ ಸಾಲಗಳಿದ್ದು, ಬೆಲೆ ಕುಸಿತ, ಹವಾಮಾನ ವೈಪರೀತ್ಯದಿಂದಾಗಿ ನಲುಗಿ ಹೋಗಿರುವ ರೈತರು ಸಾಲಗಳನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟದ ಸ್ಥಿತಿಯಲ್ಲಿರುತ್ತಾರೆ. ಇದರೊಂದಿಗೆ ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕುಗಳು ಬಡ್ಡಿ ದುಪ್ಪಟ್ಟು ಮಾಡಿ ಸುಸ್ತಿಯಾಗಿರುತ್ತದೆ ಎಂದು ಹೆದರಿಸಿ ರೈತರ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ ಎಂದು ದೂರಿದರು.
ಉದ್ಯಮಿಗಳಿಗೆ ಕೋಟ್ಯಂತರ ರೂ.ಗಳ ಸಂಕಷ್ಟದ ನೆರವು ಎಂದು ಸರ್ಕಾರ ನೀಡುತ್ತದೆ. ಆದರೆ ರಾಜ್ಯದ ಸಂಕಷ್ಟದಲ್ಲಿರುವ ಸಮಯದಲ್ಲಿ ಸಾಲ ಮನ್ನಾ ಮಾಡಿದರೆ ಲಕ್ಷಾಂತರ ರೈತರನ್ನು ಕಾಪಾಡಿದ ಹಿರಿಮೆ ಸರ್ಕಾರದ್ದಾಗುತ್ತದೆ. ಬ್ಯಾಂಕಿನವರ ಸಾಲ ವಸೂಲಾತಿಯ ಕಿರುಕುಳದಿಂದಾಗಿ ಅನೇಕ ಕುಟುಂಬಗಳು ಆತಂಕದಿಂದ ಬದುಕುತ್ತಿವೆ. ಹಾಗಾಗಿ ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 5 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಗೊಂದಳಿ ಸಮಾಜದ ರಾಜ್ಯ ನಿರ್ದೇಶಕ ರಾಕೇಶ್ ರಾವ್ ಹಾಜರಿದ್ದರು.