ಬಾಳೆಹೊನ್ನೂರು: ಸಹಕಾರಿ ಕ್ಷೇತ್ರದಲ್ಲಿ ಜವಾಹರ್ ಲಾಲ್‌ನೆಹರು, ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಿದ್ದು, ಸಹಕಾರಿ ಕ್ಷೇತ್ರ ಇಂದು ಮುಂಚೂಣಿಗೆ ಬಂದು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಾಗಿದೆ. ಕೃಷಿಗೆ ಒತ್ತು ನೀಡಿರುವುದರಿಂದ ತರಕಾರಿ, ಹಣ್ಣು ಹಾಗೂ ಇತರೆ ಆಹಾರ ಉತ್ಪನ್ನಗಳನ್ನು ರಪ್ತು ಮಾಡಲು ಸಾಧ್ಯವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬದುಕು ಹಸನಾಗಲು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಬರಬೇಕು. ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ರೈತರು ಸಂಕಷ್ಟಕ್ಕೀಡಾಗಲಿದ್ದಾರೆ. ರೈತರು ಸಹಕಾರಿ ಸಂಘಗಳಲ್ಲಿ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ. ಜಿ.ಎಸ್.ಮಹಾಬಲ ಮಾತನಾಡಿ, ಜಿಲ್ಲೆಯಲ್ಲಿ 625 ಸಹಕಾರ ಸಂಘಗಳಿದ್ದು, ಈ ಪೈಕಿ 129 ಪಿಎಸಿಎಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 10ರಲ್ಲಿ ಒಂದು ಸ್ಥಾನವನ್ನು ಬಾಳೆಹೊನ್ನೂರು ಪಿಎಸಿಎಸ್ ಪಡೆದಿದೆ. ವಿಶ್ವದಲ್ಲಿಯೇ ಸಹಕಾರ ಕ್ಷೇತ್ರಕ್ಕೆ ಮಾನ್ಯತೆ ದೊರೆತಿದ್ದು, ಯಾವ ದೇಶದಲ್ಲಿ ಸಹಕಾರ ವ್ಯವಸ್ಥೆ ಗಟ್ಟಿಯಾಗಿರುತ್ತದೋ ಅಲ್ಲಿನ ಆರ್ಥಿಕತೆ ಸುಭದ್ರವಾಗಿರುತ್ತದೆ. ಕೇಂದ್ರ ಸರ್ಕಾರ ಸಹಕಾರ ವ್ಯವಸ್ಥೆಗೆ ವಿಶೇಷ ಸ್ಥಾನಮಾನ ನೀಡಿ ಪೂರಕವಾಗಿ ನಿಂತಿದೆ. ರಾಜ್ಯ ಸರ್ಕಾರವೂ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಹಿರಿಯ ಸಹಕಾರಿಗಳ ಸಲಹೆ ಪಡೆದು ಹಲವಾರು ಬದಲಾವಣೆ ತರಬೇಕಿದೆ. ಬ್ಯಾಂಕಿಂಗ್, ಕಾರ್ಪೋರೇಟರ್ ಸಂಸ್ಥೆಗಳಿಗಿಂತ ಸಹಕಾರ ಕ್ಷೇತ್ರ ಹೆಚ್ಚು ಆರ್ಥಿಕ ಭದ್ರತೆ ಹೊಂದಿದೆ ಎಂದರು.