ಬಸವನಬಾಗೇವಾಡಿ: ರೈತರಿಗಾಗಿ ದ್ರಾಕ್ಷಿ, ಎಲೆಬಳ್ಳಿ, ದಾಳಿಂಬರಿ, ಟ್ಯಾಕ್ಟರ್ ಹಾಗೂ ಜಮೀನಿನ ಅಭಿವೃದ್ಧಿ ಸೇರಿ ಇನ್ನಿತರ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ರೈತರು ಇದರ ಲಾಭ ಪಡೆಯಬೇಕು ಎಂದು ಸಹಕಾರಿ ಮಹಾಮಂಡಳಿ ನಿರ್ದೇಶಕ- ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಭಾಭವನದಲ್ಲಿ 62ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡಿದರು.
ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು, ಶೇ.60 ರಷ್ಟು ಕೃಷಿ ಚಟುವಟಿಕೆ ಅವಲಂಬಿತವಾಗಿದೆ. ರೈತರಿಗಾಗಿ ಸರ್ಕಾರ ವಿವಿಧ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಕೃಷಿ ಚಟುವಟಿಕೆಗಳು ಹಾಗೂ ಕೃಷಿ ಜಮೀನು ಅಭಿವೃದ್ಧಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಲಾಭವನ್ನು ಪ್ರತಿಯೊಬ್ಬ ರೈತರು ಪಡೆಯಬೇಕು. ರೈತರು ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದ ಹಿನ್ನೆಲ್ಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಆದರೆ ಸದ್ಯ ರೈತರ ಬೆಳೆಗೆ ಸರ್ಕಾರವೇ ಬೆಂಬಲ ಬೆಲೆ ಮೂಲಕ ಖರೀದಿಸುವುದು ರೈತರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿದರೆ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಧ್ಯ. ಈ ಬ್ಯಾಂಕ್ 123 ಗ್ರಾಮಗಳ ವ್ಯಾಪ್ತಿ ಒಳಗೊಂಡಿದ್ದು, ಸೂಕ್ತ ದಾಖಲೆಯೊಂದಿಗೆ ಹಲವಾರು ಸಾಲ ಸೌಲಭ್ಯಗಳನ್ನು ಪಡೆದು ಮರು ಪಾವತಿ ಮಾಡಬೇಕು ಎಂದು ಹೇಳಿದರು.
ಬ್ಯಾಂಕಿನ ನಿರ್ದೇಶಕ ರಾಮನಗೌಡ ಪಾಟೀಲ ಮಾತನಾಡಿ, ರೈತರ ಅನುಕೂಲಕ್ಕಾಗಿ ಪಿಎಲ್‌ಡಿ ಬ್ಯಾಂಕ್‌ದಿಂದ ದೀರ್ಘಾವಧಿ ಸಾಲವನ್ನು ನೀಡಲಾಗುವುದು. ಆದರೆ ಪಿ.ಕೆ.ಪಿ.ಎಸ್. ಬ್ಯಾಂಕ್‌ಗಳು ಕೇವಲ ಬೆಳೆ ಸಾಲ, ಅಲ್ಪಾವಧಿ ಸಾಲ ನೀಡುತ್ತವೆ. ತಮ್ಮೆಲ್ಲರ ಸಹಕಾರ ಹಾಗೂ ಸಿಬ್ಬಂದಿ ಕಾರ್ಯ ವೈಖರಿಯಿಂದ ಬ್ಯಾಂಕ್ ಜಿಲ್ಲೆಯಲ್ಲೇ ತೃತೀಯ ಸ್ಥಾನ ಹೊಂದಿದೆ ಎಂದು ಹೇಳಿದರು.
ಪಿ.ಕೆ.ಪಿ.ಎಸ್. ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ರೈತರು ವೈಜ್ಞಾನಿಕ ಕೃಷಿ ಪದ್ಧತಿಯೊಂದಿಗೆ ಮಿಶ್ರ ಬೆಳೆ, ಬೇರೆ ಬೇರೆ ಬೆಳೆ ಬೆಳೆದಾಗ ಮಾತ್ರ ಲಾಭ ಪಡೆಯಲು ಸಾಧ್ಯ. ಡಿ.ಸಿ.ಸಿ. ಬ್ಯಾಂಕ್ ಹಾಗೂ ಪಿ.ಕೆ.ಪಿ.ಎಸ್. ಬ್ಯಾಂಕ್‌ಗಳಲ್ಲಿ ಕುರಿ ಆಡು ಸೇರಿ ಇನ್ನಿತರ ಕೃಷಿ ಚಟುವಟಿಕೆಗೆ ಸಹಕಾರವಾಗುವ ಸಾಲ ಸೌಲಭ್ಯ ನೀಡುತ್ತಿದ್ದು ರೈತರು ಲಾಭ ಪಡೆಯಬೇಕು ಎಂದು ಹೇಳಿದರು.
ವಿಜಯಪುರ ಜನತಾ ಬಜಾರದ ಅಧ್ಯಕ್ಷ ಬಾಲಚಂದ್ರ ಮುಂಜಾನೆ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಬಿ.ಎಸ್. ಪೂಜಾರಿ, ನಿರ್ದೇಶಕರಾದ ಎನ್.ಪಿ. ಬಿಸನಾಳ, ವಿ.ಎಸ್. ನಾಡಗೌಡ, ಆರ್.ವೈ. ಬಾವೂರ, ಎಂ.ಬಿ. ಪಾಟೀಲ, ಎಸ್.ಎಸ್.ಎಮ್ಮಿ, ಯು.ಜಿ. ವಿವೇಕಿ, ಎ.ಎ. ಬಿರಾದಾರ, ಜಿ.ಬಿ. ಕೊಲ್ಲಾರ, ರವಿ ರಾಠೋಡ ಇತರರಿದ್ದರು.
ಬ್ಯಾಂಕಿನ ವ್ಯವಸ್ಥಾಪಕ ಎಸ್.ಬಿ. ಮಂತ್ರಿ ವರದಿ ವಾಚಿಸಿದರು. ರವಿ ರಾಠೋಡ ಸ್ವಾಗತಿಸಿದರು. ಹಿರಿಯ ಕ್ಷೇತ್ರಾಧಿಕಾರಿ ಹನುಮಂತ ಜಾಲಗೇರಿ ನಿರೂಪಿಸಿದರು. ರಮೇಶ ನಾಠಿಕಾರ ವಂದಿಸಿದರು.