ಜಿಲ್ಲೆ

ಮದ್ಯಪಾನದ ಅಡ್ಡೆಯಾಯ್ತು ರೈತರ ಜಮೀನು

ಗಂಗಾಧರ್ ಬೈರಾಪಟ್ಟಣ ರಾಮನಗರ

ರಸ್ತೆ ಬದಿ ಆಯ್ತು, ಖಾಲಿ ನಿವೇಶನಗಳು, ಲೇಔಟ್‌ಗಳೂ ಆಯ್ತು... ಈಗ ಕುಡುಕರ ಕಣ್ಣು ರೈತರ ಜಮೀನುಗಳ ಮೇಲೆ ಬಿದ್ದಿದೆ. ಹೌದು, ದಿನದಿಂದ ದಿನಕ್ಕೆ ಕುಡುಕರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಕೃಷಿ ಜಮೀನುಗಳಿಗೆ ಬಾಟಲಿಗಳನ್ನು ಬಿಸಾಡಿ ಹೋಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ.

ಜಿಲ್ಲೆಯ ಗ್ರಾಮೀಣ ಭಾಗದ ಕೃಷಿ ಭೂಮಿ ಮದ್ಯದ ಬಾಟಲ್‌ಗಳು, ಪೌಚ್‌ಗಳು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಹಾಗೂ ನೀರಿನ ಬಾಟಲಿಗಳಿಂದ ತುಂಬಿವೆ. ಈ ಬಾರಿ ಮಳೆ ಕೊರತೆ ಕಾರಣದಿಂದ ಬಹುತೇಕ ಜಮೀನುಗಳು ಖಾಲಿ ಇರುವ ಕಾರಣ ಬಾರ್‌ಗಳಿಗೆ ಹತ್ತಿರದಲ್ಲಿಯೇ ಇರುವ ಜಮೀನುಗಳಿಗೆ ಮದ್ಯದ ಸಮೇತ ತೆರಳುವ ಪಾನಪ್ರಿಯರು, ಕುಡಿದು ಬಾಟಲ್‌ಗಳನ್ನು ಒಡೆದು, ಬಿಸಾಡಿ ಬರುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಜಮೀನುಗಳಿಗೆ ತಾವೇ ಕಾಲು ಇಡದಂತೆ ಆಗಿದೆ. ಇನ್ನು ಜಮೀನು ಉಳುಮೆ ಮಾಡಿಸುವ ಮುನ್ನ ಜಮೀನುಗಳಲ್ಲಿ ಬಿದ್ದಿರುವ ಬಾಟಲಿಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡಬೇಕಿದೆ.

ಪ್ರಶ್ನಿಸಿದರೆ ಹಲ್ಲೆ

ಒಂದು ವೇಳೆ ಮದ್ಯ ಹಿಡಿದು ಜಮೀನುಗಳಿಗೆ ನುಗ್ಗುವ ಯುವಕರ ಗುಂಪನ್ನು ತಡೆಯಲು ಮುಂದಾದರೆ ಹಲ್ಲೆ ನಡೆಸುತ್ತಿರುವ ಪ್ರಸಂಗಗಳೂ ನಡೆದಿವೆ. ಕೆಲವರು ಮರು ಮಾತನಾಡದೆ ಜಾಗ ಖಾಲಿ ಮಾಡಿದರೆ ಮತ್ತೆ ಕೆಲವರು ಭೂ ಮಾಲೀಕರ ಮೇಲೆ ಹಲ್ಲೆ ಮಾಡಿ, ನಿಂದಿಸಿರುವ ಘಟನೆಗಳು ನಡೆದಿವೆ. ಇತ್ತೀಚೆಗೆ ರಾಮನಗರದ ಲಕ್ಕೋಜನಹಳ್ಳಿ ಸಮೀಪ ಜಮೀನಿನಲ್ಲಿ ಮದ್ಯ ಸೇವಿಸುತ್ತಿದ್ದ ಯುವಕರ ಗುಂಪನ್ನು ಭೂ ಮಾಲೀಕ ಪ್ರಶ್ನೆ ಮಾಡಿದ್ದರು. ಈ ವೇಳೆ ಪಾನಮತ್ತ ಯುವಕರ ಗುಂಪು ನಿವೃತ್ತ ಪೊಲೀಸ್ ಅಧಿಕಾರಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿ ಆಗಿತ್ತು.

ಫ್ಯಾಷನ್, ಹಾಟ್‌ಸ್ಪಾಟ್!

ಕೃಷಿ ಭೂಮಿಯಲ್ಲಿ ಮದ್ಯ ಸೇವನೆ ನಡೆಯಲು ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಮದ್ಯ ಸಿಗುತ್ತಿರುವುದೇ ಪ್ರಮುಖ ಕಾರಣವಾಗಿದೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಆಗಾಗ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ತಡೆಯುವ ಯತ್ನ ನಡೆಸುತ್ತಿವೆಯಾದರೂ, ಪರಿಣಾಮಕಾರಿಯಾಗಿಲ್ಲ. ಹಾಗಾಗಿ ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ಮದ್ಯ ಸರಾಗವಾಗಿಯೇ ಸಿಗುತ್ತಿದೆ. ಬಹುತೇಕ ಗ್ರಾಮೀಣ ಭಾಗದಲ್ಲಿರುವ ವೈನ್ ಶಾಪ್‌ಗಳಲ್ಲಿ ಖರೀದಿಗೆ ವ್ಯವಸ್ಥೆ ಇರುವ ಕಾರಣ ಅಲ್ಲಿ ಖರೀದಿ ಮಾಡುವ ಪಾನ ಪ್ರಿಯರು ನಂತರ ಜಮೀನುಗಳಲ್ಲಿ ಕುಳಿತು ಪಾರ್ಟಿ ಮಾಡುತ್ತಾರೆ.

ಇನ್ನು ಬೆಂಗಳೂರು ಸೇರಿ ನಗರ ಪ್ರದೇಶದ ಜನರಿಗೆ ಪ್ರಕೃತಿ ಮಡಿಲಲ್ಲಿ ಕುಳಿತು ಮದ್ಯ ಸೇವಿಸುವುದು ಒಂದು ಫ್ಯಾಷನ್ ಆಗಿದ್ದು, ಕೃಷಿ ಭೂಮಿಯೇ ಇವರಿಗೆ ಹಾಟ್‌ಸ್ಪಾಟ್ ಆಗುತ್ತಿವೆ.

ಅಲ್ಲಲ್ಲಿ ಹೋಟೆಲ್

ಅಲ್ಲಲ್ಲಿ ತವಾ ಫಿಶ್ ಫ್ರೈ, ಹುರಿ ಬಾಡು ಮಾಡಿಕೊಡುವ ಸಣ್ಣ ಹೋಟೆಲ್‌ಗಳೂ ಗ್ರಾಮೀಣ ಭಾಗದಲ್ಲಿ ತಲೆ ಎತ್ತಿವೆ. ಆದರೆ, ಈ ಹೋಟೆಲ್‌ಗಳ ಬಳಿ ಮದ್ಯ ಸೇವನೆಗೆ ಅವಕಾಶ ಇಲ್ಲದ ಕಾರಣ, ಪೊಲೀಸರ ಭಯದಿಂದ ಮದ್ಯದ ಜತೆಗೆ ನೆಂಚಿಕೊಳ್ಳಲು ಇಂತಹ ಹೋಟೆಲ್‌ಗಳಲ್ಲಿ ಖರೀದಿ ಮಾಡಿ ಹೋಗುವವರೇ ಹೆಚ್ಚಿದ್ದಾರೆ.

ಗಸ್ತು ಹೆಚ್ಚಿಸಬೇಕಿದೆ

ಜಿಲ್ಲೆಯಲ್ಲಿ 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೂ ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟದ ಹಿನ್ನೆಲೆಯಲ್ಲಿ 848 ದಾಳಿ ನಡೆಸಿದ್ದರೆ, ಪೊಲೀಸ್ ಇಲಾಖೆ 240 ಪ್ರಕರಣಗಳನ್ನು ದಾಖಲು ಮಾಡಿದೆ. ಇದರ ಹೊರತಾಗಿಯೂ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಮುಖವಾಗಿ ರಜಾದಿನಗಳು ಹಾಗೂ ಸಂಜೆ ವೇಳೆಯಲ್ಲಿ ಗಸ್ತು ಹೆಚ್ಚಿಸಿ ರೈತರ ಜಮೀನುಗಳಿಗೆ ನುಗ್ಗುವ ಕುಡುಕರ ಹಾವಳಿ ತಪ್ಪಿಸಬೇಕಿದೆ.

ನನ್ನ ಜಮೀನನ್ನು ಕುಡಿಯುವ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಮೊನ್ನೆ ಜಮೀನು ಸ್ವಚ್ಛಗೊಳಿಸಲು ಹೋದರೆ ಸಾಕಷ್ಟು ಮದ್ಯದ ಬಾಟಲ್‌ಗಳು ಸಿಕ್ಕಿವೆ. ಯಾರನ್ನಾದರೂ ಪ್ರಶ್ನೆ ಮಾಡಿದರೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಸ್ವಾಮಿ, ಲಕ್ಕೋಜನಹಳ್ಳಿ