ಚಿಕ್ಕೋಡಿ: ಗಡಿ ಭಾಗದ ರೈತರ ಕಾಮಧೇನು ಎನಿಸಿಕೊಂಡಿರುವ ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕವಾಗಿ ಸಬಲವಾಗಿದ್ದು, ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗುತ್ತಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಕಾರ್ಖಾನೆಯ ರೂವಾರಿ ಡಾ.ಪ್ರಭಾಕರ ಕೋರೆ ಹೇಳಿದರು.
ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 56ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಆಧುನಿಕ ಕೃಷಿ ಪರಂಪರೆ ಅಳವಡಿಸಿಕೊಂಡರೆ ರೈತರು ಆರ್ಥಿಕ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ. ಯುವಕರು ಕೃಷಿಯತ್ತ ಹೆಚ್ಚು ಗಮನ ಹರಿಸಬೇಕು. ಸಹಕಾರಿ ಸಕ್ಕರೆ ಕಾರ್ಖಾನೆಗಳು ಬೆಳೆಯಬೇಕಾದರೆ ರೈತರು ಹೆಚ್ಚು ಕಬ್ಬು ಕಳಿಸಬೇಕು. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯ ಕಿಸಾನ್ ಬಜಾರ್‌ನಲ್ಲಿ ಪಂಪಸೆಟ್ ದುರಸ್ತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ರಾಷ್ಟ್ರೀಯ ಸಹಕಾರ ಸಕ್ಕರೆ ಮಹಾಮಂಡಳ ನಿರ್ದೇಶಕ ಅಮಿತ ಕೋರೆ ಮಾತನಾಡಿ, ಸಹಕಾರಿ ಸಕ್ಕರೆ ಕಾರ್ಖಾನೆಯು 121 ದಿನದಲ್ಲಿ 11,44,941 ಮೆಟ್ರಿಕ್ ಟನ್ ಕಬ್ಬು ನುರಿಸಿ, 11.66 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದನೆ ಮಾಡಿದೆ. ಶೇ.11.40 ರಿಕವರಿ ಸಾಧಿಸಿದೆ. 500 ಕಿ.ವ್ಯಾ.ಸೋಲಾರ ವಿದ್ಯುತ್ ಘಟಕ ಅಳವಡಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 8.50 ಕೋಟಿ ರೂ. ವ್ಯವಹಾರ ಮಾಡಲಾಗಿದೆ. 18 ಸಾವಿರ ಸದಸ್ಯರು ವಿಮೆ ಸೌಲಭ್ಯದ ಪ್ರಯೋಜನ ಪಡೆದುಕೊಂಡಿದ್ದಾರೆ. ಉದ್ಯೋಗಾವ ಕಾಶ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಯುವಕರಿಗಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಸಿ.ಬಿ.ಕೋರೆ ಸಹಕಾರ ಕ್ಷೇತ್ರದ ಮಾದರಿ ಕಾರ್ಖಾನೆ ಎನಿಸಿಕೊಂಡು ರೈತರ ಹಿತ ಕಾಪಾಡುತ್ತಿದೆ. ಕಾರ್ಖಾನೆಯಿಂದ 2 ಲಕ್ಷ ಲೀಟರ್ ಸಾಮರ್ಥ್ಯದ ಇಥೆನಾಲ್ ಘಟಕ ಪ್ರಾರಂಭಿಸಿದ್ದು, ಪ್ರತಿದಿನ 10 ಸಾವಿರ ಟನ್ ಕಬ್ಬು ನುರಿಸುವ ಹೊಸ ತಂತ್ರಜ್ಞಾನ ಅಳವಡಿಸಿ ರೈತಪರವಾಗಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಖಾನೆಯ ಸದಸ್ಯರ ಅಪಘಾತ ವಿಮೆ ಯೋಜನೆಯಡಿ ಫಲಾನುಭವಿಗಳಿಗೆ 15 ಲಕ್ಷ ರೂ. ಚೆಕ್ ವಿತರಿಸಲಾಯಿತು. ಡಾ.ಪ್ರಭಾಕರ ಕೋರೆ ಹಾಗೂ ಅಮಿತ ಕೋರೆ ಅವರನ್ನು ಕಾರ್ಖಾನೆಯ ಕಾರ್ಮಿಕರು ಸನ್ಮಾನಿಸಿ ಗೌರವಿಸಿದರು.
ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕ ಅಜಿತ ದೇಸಾಯಿ, ಭರತೇಶ ಬನವಣೆ, ಚೇತನ ಪಾಟೀಲ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಮಲ್ಲಪ್ಪ ಮೈಸಾಳೆ, ಅಣ್ಣಾಸಾಹೇಬ ಇಂಗಳೆ, ಭೀಮಗೌಡ ಪಾಟೀಲ, ನಂದಕುಮಾರ ನಾಶಿಪುಡಿ, ಮಹಾವೀರ ಕಾತ್ರಾಳೆ ಇತರರು ಉಪಸ್ಥಿತರಿದ್ದರು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಐ.ಎನ್.ಗೊಲಬಾವಿ ವಾರ್ಷಿಕ ವರದಿ ಮಂಡಿಸಿದರು. ಪರಸಗೌಡ ಪಾಟೀಲ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ನಾಗಯ್ಯ ಹಿರೇಮಠ ವಂದಿಸಿದರು.
ಚಿದಾನಂದ ಕೋರೆ ಮತ್ತು ಶಿವಶಕ್ತಿ ಶುಗರ್ಸ್‌ಗಳಲ್ಲಿ ನೂತನ ತಂತ್ರಜ್ಞಾನ ಆಧಾರಿತ ತೂಕದ ಯಂತ್ರ ಅಳವಡಿಸಿಕೊಂಡಿರುವುದರಿಂದ ಕಬ್ಬಿನ ತೂಕದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ತೂಕದಲ್ಲಿ ನೂನ್ಯತೆ ಕಂಡು ಬಂದರೆ 5 ಲಕ್ಷ ರೂ.ಬಹುಮಾನ ನೀಡಲಾಗುವುದು.| ಅಮಿತ ಕೋರೆ, ರಾಷ್ಟ್ರೀಯ ಸಹಕಾರ ಸಕ್ಕರೆ ಮಹಾಮಂಡಳದ ನಿರ್ದೇಶಕ