ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು- ನಾಲ್ಕು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಅತಿಯಾದ ಮಳೆಯಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಅದರಲ್ಲಿಯೂ ಖುಷಿ ಪ್ರದೇಶದ ರೈತರು ಬೆಳೆಗಳನ್ನು ನೋಡಿ ನರಕಯಾತನೆ ಅನುಭವಿಸುವ ಸ್ಥಿತಿ ಉದ್ಭವಿಸಿದೆ.
ಈ ಬಾರಿಯು ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಸಂತಸದಿಂದ ಹತ್ತಿ, ತೊಗರಿ,ಹೆಸರು, ಸೂರ್ಯಕಾಂತಿ ಸೇರಿದಂತೆ ಅನೇಕ ಬೆಳೆಗಳನ್ನು ಬಿತ್ತನೆ ಮಾಡಿದರು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಮಾಡಿದ ಬೆಳೆಗಳಿಗೆ ತೇವಾಂಶ ಹೆಚ್ಚಳದಿಂದ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಮಳೆಗೆ ಬೆಳೆಗಳು ಹಾಳು
ಏಕಾಏಕಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಮಳೆ ಕೈ ಹಿಡಿದ ಕೂಡಲೇ ಯೂರಿಯಾ ಗೊಬ್ಬರದ ಅಭಾವ ಮತ್ತೊಂದು ತಲೆನೋವು ಸೃಷ್ಟಿ ಮಾಡಿತು. ಸಕಾಲಕ್ಕೆ ಯೂರಿಯಾ ಪೂರೈಕೆಯಾಗದೇ ರೈತರು ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಕಷ್ಟಪಟ್ಟು ಯೂರಿಯಾ ಗೊಬ್ಬರ ತೆಗೆದುಕೊಂಡು ಹೊಲಗಳಿಗೆ ಹೋದ ರೈತರಿಗೆ ಪ್ರಸ್ತುತ ಅತಿಯಾದ ಮಳೆಯಿಂದ ಸಂಕಷ್ಟ ಎದುರಾಗಿದೆ.
ಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ ರೈತರು ಅತಿ ಹೆಚ್ಚು ತೊಗರಿ, ಹತ್ತಿ ಬಿತ್ತನೆ ಮಾಡಿದ್ದು, ನಿರಂತರ ಜಿಟಿಜಿಟಿ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗುತ್ತಿವೆ. ಹೋಕ್ರಾಣಿ,ಕುರ್ಡಿ,ಕಪಗಲ್,ಮಾಚನೂರು,ಬೊಮ್ಮನಾಳ, ಸಿಂಗಡದಿನ್ನಿ,ಗಣದಿನ್ನಿ,ಕಲ್ಮಾಲ ಸೇರಿದಂತೆ ಇತರೆ ಹಳ್ಳಿಗಳ ತಗ್ಗು ಪ್ರದೇಶದ ಜಮೀನಿನಲ್ಲಿ ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆಗಳು ತೇವಾಂಶ ಹೆಚ್ಚಾಗಿ ಒಣಗುತ್ತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ಮೋಡ ಕವಿದ ವಾತಾವರಣದಿಂದ ತೊಗರಿ ಹಾಗೂ ಸೂರ್ಯಕಾಂತಿ ಬೆಳೆಯಲ್ಲಿ ಎಲೆಚುಕ್ಕೆ ರೋಗ ಕಾಡುತ್ತಿದೆ. ಮಳೆ ಬಂದು ಬೆಳೆ ಹಾಳಾಗುತ್ತಿರುವುದು ಒಂದು ಕಡೆಯಾದರೆ ಮೋಡ ಮುಸುಕಿದ ವಾತಾವರಣದಿಂದ ಬೆಳೆಗೆ ಹುಳುವಿನ ಕಾಟ ಕಾಡುತ್ತಿದೆ. ಹತೋಟಿಗೆ ತರಲು ಔಷಧ ಸಿಂಪಡಣೆ ಮಾಡಿದರೂ ತೊಗರಿ,ಹತ್ತಿ ತೇವಾಂಶ ಹೆಚ್ಚಳದಿಂದ ಕೊಳೆಯುತ್ತಿದೆ.
ರೈತರಿಗೆ ಸಂಕಷ್ಟದ ಆತಂಕ ತಿಂಗಳ ಹಿಂದೆ ಮಳೆಯಿಲ್ಲದೆ ಜಿಲ್ಲೆಯ ಸಿರವಾರ,ಮಾನ್ವಿ,ಲಿಂಗಸೂಗೂರು,ರಾಯಚೂರು,ಮಸ್ಕಿ ತಾಲೂಕಿನ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಮತ್ತೊಂದಡೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಅವಧಿಗೂ ಮುನ್ನವೇ ನೀರು ಬಿಟ್ಟಿದ್ದರಿಂದ ಸಿಂಧನೂರು ಹಾಗೂ ಮಾನ್ವಿ ತಾಲೂಕಿನ ಕೆಲವು ಭಾಗದಲ್ಲಿ ಭತ್ತ ನಾಟಿ ಕಾರ್ಯ ಜೋರಾಗಿತ್ತು. ಈ ಮೂಲಕ ಒಟ್ಟಾರೆ, ಎರಡು ತಿಂಗಳ ಅವಧಿ ಯಲ್ಲಿ ಎರಡು ಬರ-ನೆರೆ ನೋಡುವ ಗಂಭೀರ ಸನ್ನಿವೇಶಗಳಿಗೆ ಜಿಲ್ಲೆ ಸಾಕ್ಷಿಯಾಗಿದೆ.ಜಿಲ್ಲೆಯಲ್ಲಿ ಎಷ್ಟು ಮಳೆ
ಜಿಲ್ಲೆಯಲ್ಲಿ ಕಳೆದ ಒಂದು ವಾರದದಲ್ಲಿ 46 ಮಿಮೀ ಮಳೆಯಾಗಿದ್ದು, ಈ ಪೈಕಿ ದೇವದುರ್ಗದಲ್ಲಿ 52.3 ಮಿ.ಮೀ.,ಲಿಂಗಸುಗೂರು 35.5 ಮಿ.ಮೀ.,ಮಾನ್ವಿ 44.2ಮಿ.ಮೀ.,ರಾಯಚೂರು 71.2ಮಿ.ಮೀ.,ಸಿಂಧನೂರು 36.6ಮಿ.ಮೀ.,ಮಸ್ಕಿ 29.2 ಮಿ.ಮೀ.,ಸಿರವಾರ 46.2 ಮಿ.ಮೀ.ಮಳೆಯಾಗಿದೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಮೀನಿನಲ್ಲಿ ನೀರು ನಿಂತರೆ ಕೂಡಲೇ ಬದು ಮಾಡಿಕೊಂಡು ನೀರು ಹೋಗಲು ದಾರಿ ಮಾಡಿಕೊಟ್ಟರೆ, ಬೆಳೆಗಳಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಕುರಿತು ನಮ್ಮ ಇಲಾಖೆಯಿಂದ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ಪ್ರಕಾಶ ಚೌಹಣ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ರಾಯಚೂರು.