ಮೈಸೂರು: ನೈಸರ್ಗಿಕ ಮತ್ತು ಸಾವಯವ ವ್ಯವಸಾಯಕ್ಕೆ ಪೂರಕವಾದ ದೇಸಿ ಬಿತ್ತನೆ ಬೀಜಗಳಿಗೆ ಬೇಡಿಕೆ ಇದ್ದು, ರೈತರೇ ಬೀಜೋತ್ಪಾದನೆ ಮಾಡುವ ಮೂಲಕ ಕೃಷಿ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಜಿಐಜಡ್ ಜರ್ಮನಿಯ ಹಿರಿಯ ಸಲಹೆಗಾರ್ತಿ ನಮ್ರತಾ ಶರ್ಮ ಅಭಿಪ್ರಾಯಪಟ್ಟರು.
ನಗರದ ‘ದೇಸಿ ಬೀಜ ಉತ್ಪಾದಕರ ಕಂಪನಿ’ಯಲ್ಲಿ ಸೋಮವಾರ ಆಯೋಜಿಸಿದ್ದ 12ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ದಿನದಿಂದ ದಿನಕ್ಕೆ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೈಸರ್ಗಿಕ ಕೃಷಿ ಉತ್ತೇಜನಕ್ಕೆ ಅನೇಕ ಯೋಜನೆಗಳನ್ನು ರೂಪಿಸಿವೆ. ಇವುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಹಕರು ವಿಷಮುಕ್ತವಾಗಿ ಬೆಳೆದ, ನಾಟಿ ಹಣ್ಣು ತರಕಾರಿ ಮತ್ತು ಧಾನ್ಯಗಳ ಬಳಕೆಗೆ ಆಸಕ್ತಿ ತೋರುತ್ತಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜಗಳ ಕೊರತೆ ಈಗ ಎದುರಾಗಿದೆ. ರೈತ ಗುಂಪು ಮತ್ತು ಮಹಿಳಾ ಸಂಘಗಳು ಸಮುದಾಯ ಬೀಜ ಬ್ಯಾಂಕ್‌ಗಳನ್ನು ಆರಂಭಿಸಿ, ದೇಸಿ ಬೀಜೋತ್ಪಾದನೆಗೆ ಉತ್ತೇಜನ ನೀಡಬೇಕು ಎಂದು ನಮ್ರತಾ ಶರ್ಮ ಸಲಹೆ ನೀಡಿದರು.
ಕೈಗೆಟುಕುವ ದರದಲ್ಲಿ ಮಾರಾಟ:
ರೈತರಿಗೆ ಚೆಕ್ ವಿತರಿಸಿ ಮಾತನಾಡಿದ ಸಹಜ ಸಮೃದ್ಧ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಶೆಟ್ಟಿ ಅವರು, ಖಾಸಗಿ ಬೀಜ ಕಂಪನಿಗಳು ದುಬಾರಿ ಬೆಲೆಗೆ ಬಿತ್ತನೆ ಬೀಜಗಳನ್ನು ಮಾರುತ್ತಿವೆ. ಮಾರುಕಟ್ಟೆ ಕುಸಿತ ಅಥವಾ ಹವಾಮಾನ ವೈಪರೀತ್ಯದಿಂದ ಬೆಳೆ ನಾಶವಾದರೆ ರೈತರ ಗೋಳು ಕೇಳುವವರಿಲ್ಲ. ಸ್ಥಳೀಯ ವಾತಾವರಣ ಮತ್ತು ಮಣ್ಣಿಗೆ ಸೂಕ್ತವಾಗಬಲ್ಲ ದೇಸಿಯ ತಳಿಗಳ ಬೀಜಗಳನ್ನು ರೈತರು ಬಳಸಬೇಕು. ಈ ನಿಟ್ಟಿನಲ್ಲಿ ಸಹಜ ಸೀಡ್ಸ್ ಗುಣಮಟ್ಟದ ದೇಸಿ ಬೀಜಗಳನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೊಡುಗೆ ಅಮೂಲ್ಯ:
ಸಹಜ ಆರ್ಗಾನಿಕ್ಸ್ ಇಒ ಸೋಮೇಶ್ ಮಾತನಾಡಿ, ದೇಸಿ ಬೀಜಗಳನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯವನ್ನು ರೈತ ಮಹಿಳೆಯರು ಮಾಡುತ್ತಿದ್ದಾರೆ. ಬೀಜ ಸ್ವಾವಲಂಬನೆಯನ್ನು ಸಾಕಾರಗೊಳಿಸುತ್ತಿರುವ ಇವರ ಕೊಡುಗೆ ಅಮೂಲ್ಯ ಎಂದರು.
ಲಾಂಭಾಂಶ ವಿತರಣೆ: ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಸಮಾನ ಮನಸ್ಕ ಬೀಜ ಸಂರಕ್ಷಕರು ಜತೆ ಸೇರಿ ಆರಂಭಿಸಿದ ರೈತ ಕಂಪನಿ, ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಿದ್ದು, 23-24ರ ಸಾಲಿನಲ್ಲಿ ಗಳಿಸಿದ 4.88 ಲಕ್ಷ ರೂ. ಲಾಭಾಂಶವನ್ನು ದೇಸಿ ಬೀಜ ಪೂರೈಸಿದ ಷೇರುದಾರ ರೈತರಿಗೆ ವಿತರಿಸಲಾಯಿತು.
7.5 ಲಕ್ಷ ಮೌಲ್ಯದ ಸಾವಯವ ಬೀಜಗಳನ್ನು ಉತ್ಪಾದಿಸಿದ ಬೆಳಗಾವಿಯ ಶಂಕರ ಲಂಗಟಿ ಮತ್ತು ಅವರ ತಂಡ 37,599 ರೂ. ಬೋನಸ್ ಪಡೆದರು. ಪಿರಿಯಾಪಟ್ಟಣದ ಸಹಜ ಸಾವಯವ ಕೃಷಿಕರ ಬಳಗವು 3.51 ಲಕ್ಷ ರೂ. ಮೌಲ್ಯದ ಬೀಜ ಪೂರೈಸಿ, ರೂ.17,790 ಬೋನಸ್, ಕೊಳ್ಳೇಗಾಲದ ಅರೇಪಾಳ್ಯದ ಲೋಕೇಶ 2.84 ಲಕ್ಷ ಮೌಲ್ಯದ ಬೀಜ ಪೂರೈಸಿ 14,207 ರೂ. ಬೋನಸ್ ಪಡೆದರು. ಒಟ್ಟು 23 ರೈತರಿಗೆ ಬೋನಸ್ ವಿತರಿಸಲಾಯಿತು. ಕಂಪನಿ ಸಂಸ್ಥಾಪಕ ಜಿ.ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸಹಜ ಸೀಡ್ಸ್‌ನ ಇಒ ಗಳಾದ ರವಿ ಮಾಗಲ್, ಸಿಬ್ಬಂದಿ ಕೆ.ಎಸ್.ಮಂಜು, ಸೈಯದ್ ಜಮಾಲ್, ಶಿವರುದ್ರ, ಅರ್ಪಿತಾ, ಮನು ಇತರರು ಇದ್ದರು.