ಕುರುಬೂರು ಶಾಂತಕುಮಾರ್  
ಜಿಲ್ಲೆ

ಮೈಸೂರಿನಲ್ಲಿ ಡಿ. 23ರಂದು ರೈತರ ಹಬ್ಬ ಆಚರಣೆ

ಮೈಸೂರು: ವಿಶ್ವ ರೈತ ದಿನಾಚರಣೆ ಅಂಗವಾಗಿ ಡಿ.23ರಂದು ನಗರದಲ್ಲಿ ವಿಶಿಷ್ಟವಾಗಿ ರಾಜ್ಯ ಮಟ್ಟದ ಸಮಾವೇಶ ‘ರೈತರ ಹಬ್ಬ’ ಆಚರಿಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಬೆಳಗ್ಗೆಯಿಂದ ಸಂಜೆ ವರೆವಿಗೂ ನಾನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ಸಾಲ ನೀತಿ ಬದಲಾಗಬೇಕು, ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಬೇಕು, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್, ಕೃಷಿಭೂಮಿ ಮುಟ್ಟುಗೋಲು ಕಾಯ್ದೆ ರದ್ದಾಗಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು ಎಂದು ರೈತ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ, ಕೃಷಿ ಉಪಕರಣಗಳು ರಸಗೊಬ್ಬರ, ಕೀಟನಾಶಕ, ಮೊಸರು ಮಜ್ಜಿಗೆ ಇತರ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್‌ಟಿ ಸುಂಕ ರದ್ದು, ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ತಡೆ ನೀಡಲು ಕಠಿಣ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಲಾಗುವುದು ಎಂದರು.

ಕೃಷಿ ಮೇಳಗಳ ಬದಲು ರೈತರ ನೆನಪಿನ ಹಬ್ಬದ ದಿನಾಚರಣೆಗಳಾಗಬೇಕು. ಕೃಷಿ ಭೂಮಿ, ನೀರು ಅರಣ್ಯ ಪರಿಸರ ರಕ್ಷಿಸಲು ಜಲಾಶಯಗಳು, ಕೆರೆ-ಕಟ್ಟೆಗಳ ಹೂಳು ತೆಗೆಸಲು ಕಾರ್ಯ ಯೋಜನೆ ಜಾರಿಯಾಗಬೇಕು. ಪರಿಸರ ಸಂರಕ್ಷಿಸಲು ಸಾವಿರಾರು ಮರ ಬೆಳೆಸಿದ ಕಂಪನಿ, ಸಂಸ್ಥೆಗಳಿಗೆ ಶೇ.25 ತೆರಿಗೆ ವಿನಾಯಿತಿ ನೀಡುವಂತಾಗಬೇಕು. ಕಬ್ಬಿನ ಎಫ್‌ಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿಯಾಗಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುವ ಸಕ್ಕರೆ ಕಾರ್ಖಾನೆಗಳ ಮೋಸ ತಪ್ಪಿಸಲು ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರುವಂತೆ ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

ಫಸಲ್ ಬಿಮಾ ಬೆಳೆ ವಿಮಾ ಪದ್ಧತಿ ನೀತಿ ಬದಲಾಗಬೇಕು. ಪ್ರತಿ ರೈತನ ಹೊಲದ ಬೆಳೆ ವಿಮೆ ನಷ್ಟ ಪರಿಹಾರ ಸಿಗುವಂತಾಗಬೇಕು. ಎಪಿಎಂಸಿಗಳಲ್ಲಿ ದಲ್ಲಾಳಿಗಳು ರೈತರಿಂದ ಶೇ.10ರಷ್ಟು ಕಮಿಷನ್ ವಸೂಲಿ ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕೃತಿ ವಿಕೋಪಕ್ಕೆ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು. ರೈತರ ಮಗನ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಶೇ.20 ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ಬರಬೇಕು ಎಂದು ಹಕ್ಕೊತ್ತಾಯ ಮಾಡಲಾಗುವುದು ಎಂದು ತಿಳಿಸಿದರು.

ತೆಲಂಗಾಣ ರಾಜ್ಯದ ಮಾದರಿಯಲ್ಲಿ 60 ವರ್ಷ ತುಂಬಿದ ರೈತರಿಗೆ 10 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ರಾಜ್ಯದಲ್ಲಿ 10 ಲಕ್ಷ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಕೂಡಲೇ ಬೇಸರತ್ತಾಗಿ ಸಾಗುವಳಿ ಪತ್ರ ನೀಡಬೇಕು. ಯುವಕರ ಭವಿಷ್ಯ ಹಾಳು ಮಾಡುತ್ತಿರುವ ಆನ್‌ಲೈನ್ ಗೇಮ್, ಜೂಜು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಿವೃತ್ತ ಪ್ರಾಂಶುಪಾಲ ಮಹದೇವಯ್ಯ, ಶುಂಠಿ ಬೆಳೆಗಾರರ ಸಂಘದ ಅಧ್ಯಕ್ಷ ಮಹಿಮಹೇಶ್, ಮುಖಂಡರಾದ ಎಂ.ಬಿ.ಚೇತನ್, ವಸಂತಕುಮಾರ್, ಅತ್ತಹಳ್ಳಿ ದೇವರಾಜ್, ನಾಗಾರ್ಜುನ, ಕಿರಗಸೂರು ಶಂಕರ, ಬರಡನಪುರ ನಾಗರಾಜ್, ನೀಲಕಂಠಪ್ಪ, ರೇವಣ್ಣ, ಮಹದೇವಸ್ವಾಮಿ, ಸಿದ್ದೇಶ್, ವೆಂಕಟೇಶ್, ವಿಜಯೇಂದ್ರ, ರಾಜೇಶ್, ಪರಶಿವಮೂರ್ತಿ, ಮಂಜುನಾಥ್, ಸುನೀಲ್ ಇತರರು ಇದ್ದರು.