ಬಾಗಲಕೋಟೆ: ಎದೆ ಎತ್ತರ ಬೆಳೆದು ಭರ್ಜರಿ ತೆನೆ ಬಿಟ್ಟಿದ್ದರೂ ಕಾಳುಗಟ್ಟದ ಹಿನ್ನೆಲೆಯಲ್ಲಿ ರೈತರು ಅಂದಾಜು 18 ಎಕರೆಯಷ್ಟು ಸೂರ್ಯಕಾಂತಿ ಬೆಳೆಯನ್ನು ನಾಶಪಡಿಸಿರುವ ಘಟನೆ ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.
ಟ್ರಾೃಕ್ಟರ್ ರೂಟರ್ ಮೂಲಕ ಬೆಳೆದು ನಿಂತಿದ್ದ ಬೆಳೆಯನ್ನು ಒಲ್ಲದ ಮನಸ್ಸಿನಿಂದಲೇ ಹರಗಿ ಬೆಳೆ ನಾಶಪಡಿಸಿದ್ದಾರೆ. ಮಹಾಲಿಂಗಪ್ಪ ಅಂಗಡಿ ಅವರ 6 ಎಕರೆ, ಯಂಕಪ್ಪ ಅವರ 4 ಎಕರೆ, ರುಕ್ಮವ್ವ ಹೊಸಕಟ್ಟೆ ಅವರ 8 ಎಕರೆ ಸೇರಿ ಒಟ್ಟು 18 ಎಕರೆ ಬೆಳೆನಾಶಪಡಿಸಿದ್ದಾರೆ.
ತೆನೆ ಕಾಳುಗಟ್ಟದೇ ಇರುವುದಕ್ಕೆ ಬೀಜ ಕಳಪೆ ಆಗಿರುವುದೇ ಕಾರಣ ಎನ್ನುವುದು ರೈತರ ಆರೋಪ. ಕಳೆದ ಜನೆವರಿ ಅಂತ್ಯಕ್ಕೆ ಪ್ರತಿಷ್ಠಿತ ಕಂಪನಿಯ ಬೀಜ ಖರೀದಿಸಿ ಬಿತ್ತನೆ ಮಾಡಿದ್ದು, ಬೆಳೆಯೇನೋ ಚೆನ್ನಾಗಿಯೇ ಬೆಳೆದಿದೆ. ಆದರೆ, ಕಾಳು ಹಿಡಿದಿಲ್ಲ. ಇದಕ್ಕೆ ಕಾರಣ ಬೀಜ ಕಳಪೆ ಇರುವುದು. ಈ ಬಗ್ಗೆ ಖಾಸಗಿ ಕಂಪನಿ, ಕೃಷಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬೆಳೆನಾಶ ಪಡಿಸಿದ್ದೇವೆ. ಇದಕ್ಕೆ ಸೂಕ್ತ ಪರಿಹಾರ ಕೊಡಬೇಕು ಎನ್ನುವುದು ರೈತರ ಆಗ್ರಹ.
ಆದರೆ, ತೆನೆ ಕಾಳು ಹಿಡಿಯದೇ ಇರುವುದಕ್ಕೆ ಬೀಜ ಕಳಪೆ ಕಾರಣವಲ್ಲ ಎನ್ನುವ ಬೀಜ ನೀಡಿರುವ ಅಗ್ರೋ ಕೇಂದ್ರ ಹಾಗೂ ಖಾಸಗಿ ಕಂಪನಿ ವಾದವಾಗಿದೆ. ಕಾಳುಗಟ್ಟಿಲ್ಲ ಎನ್ನುವ ದೂರಿನ ಮೇರೆಗೆ ನಾವು ಜಮೀನಿಗೆ ಭೇಟಿ ಕೊಟ್ಟು ಪರಿಶೀಲಿಸಿದ್ದೇವೆ. ಈ ವರ್ಷ ದಾಖಲೆಯ 45 ರಿಂದ 46 ಡಿಗ್ರಿ ಸೆಲ್ಸಿಯಸ್ ವರೆಗೂ ಬಿಸಿಲು ಇತ್ತು. ಇದರಿಂದ ಪರಾಗ ಸ್ಪರ್ಷ ಆಗಿಲ್ಲ. ಅಲ್ಲದೇ ಜೂನ್ ಅಂತ್ಯಕ್ಕೆ ಬೀಜ ಖರೀದಿಸಿ, ಫೆಬ್ರುವರಿ ಮೊದಲ ವಾರ ಬಿತ್ತನೆ ಮಾಡಿರುವುದು ಸಹ ಅವಧಿ ಮುಕ್ತಾಯವೂ ಒಂದು ಕಾರಣವಾಗಿದೆ. ಜಮಖಂಡಿ ವಿಭಾಗದಲ್ಲಿ ಅಂದಾಜು 5 ಸಾವಿರ ಕೆಜಿ ಬೀಜ ವಿತರಣೆ ಮಾಡಿದ್ದರೂ ಎಲ್ಲಿಯೂ ಸಹ ಈ ರೀತಿ ದೂರು ಬಂದಿಲ್ಲ ಎಂದು ಖಾಸಗಿ ಕಂಪನಿಯವರು ಹೇಳುತ್ತಾರೆ.
ಕಾರಣ ಏನೇ ಇರಲಿ, ಆದರೆ, ರೈತರು ಕಷ್ಟಪಟ್ಟು ಸಾಲಸೂಲ ಮಾಡಿ, ಭೀಕರ ಬರದಲ್ಲಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಬೆಳೆ ಕಾಳುಗಟ್ಟದೇ ರೈತರಿಗೆ ಲಾಸ್ ಆಗಿದ್ದಂತೂ ಸತ್ಯ. ಇದಕ್ಕೆ ಬೆಳೆಹಾನಿ ಪರಿಹಾರ ನೀಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.