ಕಂಪ್ಲಿ: ಮೆಣಸಿನಕಾಯಿ ಬೆಳೆಗೆ ಥ್ರಿಬ್ಸ್(ಎಲೆ ಮುರುಟು) ರೋಗ ಕಾಣಿಸಿಕೊಂಡಿದ್ದು, ರೋಗ ನಿಯಂತ್ರಣಗೊಳ್ಳದೆ ಕಣ್ವಿ ತಿಮ್ಮಲಾಪುರ ಭಾಗದ ಕೆಲ ರೈತರು ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಟಿಲ್ಲರ್ ಹೊಡೆದು ಬೆಳೆ ನಾಶ ಮಾಡಿದ್ದಾರೆ. ಲಾಭದ ನಿರೀಕ್ಷೆಯಲ್ಲಿದ್ದ ಕೃಷಿಕರಿಗೆ ಮೆಣಸಿನಕಾಯಿ ನಷ್ಟದ ಘಾಟು ನೀಡಿದೆ.
ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಥ್ರಿಬ್ಸ್ ಕಾಣಿಸಿಕೊಂಡಿದೆ. ಎಕರೆಗೆ ಎರಡು ಲಕ್ಷ ರೂ. ವೆಚ್ಚ ಮಾಡಿದ್ದ ಮೆಣಸಿನಕಾಯಿ ಬೆಳೆಯ ಎಲೆಗಳು ಸುಕ್ಕಾಗಿ, ಬೆಳವಣಿಗೆ ಕುಂಠಿತಗೊಂಡಿತ್ತು. ಇನ್ನೂ ಎರಡು ತಿಂಗಳ ಕಾಲ ಬೆಳವಣಿಗೆ ಹೊಂದಿ ಕೆಂಪು ಮೆಣಸಿನಕಾಯಿ ಇಳುವರಿ ಕೊಡುವ ಮುನ್ನವೇ ಬೆಳೆ ಹಾಳಾಗಿದ್ದು ರೈತರ ಕಣ್ಣೀರಿಗೆ ಕಾರಣವಾಗಿದೆ.
ಥ್ರಿಬ್ಸ್ ರೋಗ ಕಾಣಿಸಿಕೊಂಡು ಎಲೆಗಳೆಲ್ಲ ಸುಕ್ಕುಗಟ್ಟಿ ಹೋಗಿದ್ದನ್ನು ನೋಡಲಾಗದೆ, ಮೆಣಸಿನ ಬೆಳೆಯನ್ನು ನಾಶ ಮಾಡಿದ್ದೇವೆ. ಎಕರೆಗೆ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದು ಕೇವಲ 45ಸಾವಿರ ರೂ. ಹಸಿಮೆಣಸಿನಕಾಯಿ ದೊರೆತಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಮಾಡಿಕೊಂಡಿದ್ದೇವೆ ಎಂದು ಬೆಳೆ ನಾಶ ಮಾಡಿದ ರೈತರಾದ ಗೊಲ್ಲರ ಪಂಪಾಪತಿ, ಜಿ.ಸಿದ್ದಪ್ಪ, ಕೆ.ಪಂಪಾಪತಿ ಅಳಲು ತೊಡಿಕೊಂಡರು.
ಥ್ರಿಬ್ಸ್ (ಎಲೆ ಮುಟುರು)ರೋಗ ಬಾಧೆಯಿಂದ ಮೆಣಸಿನಕಾಯಿ ಬೆಳೆ ರಕ್ಷಿಸಲು ಕೀಟನಾಶಕಗಳಾದ 0.3ಮಿ.ಲೀ ಇಮಿಡಾಕ್ಲೋಪ್ರಿಡ್ 17.8ಎಸ್.ಎಲ್ ಅಥವಾ 0.2ಗ್ರಾಂ ಥಯೋಮೆಥಾಕ್ಸಾಮ್ 25ಡ್ಲ್ಯೂ.ಜಿ. ಅಥವಾ 1.0ಮೀ.ಲೀ ಫಿಪ್ರೋ ನಿಲ್ 5ಎಸ್.ಸಿ ಅಥವಾ 1.0 ಡಯಾಫೆನ್ ಥಯೂರಾನ್ 50ಡಬ್ಲ್ಯೂ.ಪಿ.ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮಾಹಿತಿಗೆ ತಾಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ(ಮೊ.80732 19573)ಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸಾಲ ಮಾಡಿಕೊಂಡು ಕೆಂಪು ಮೆಣಸಿನಕಾಯಿ ಬೆಳೆದಿದ್ದೆ. ರೋಗ ಬಿದ್ದು ಬೆಳೆ ಹಾಳಾಗಿದೆ. ಎಕರೆಗೆ ಒಂದೂವರೆ ಲಕ್ಷ ರೂ. ನಷ್ಟವಾಗಿದೆ. ಮೆಣಸಿನಕಾಯಿ ಬೆಳೆದವರ ಕಷ್ಟ ಕೇಳೋರಿಲ್ಲದಂತಾಗಿದೆ. ತೋಟಗಾರಿಕೆ ಇಲಾಖೆಯಿಂದ ಧನಸಹಾಯ ಕೊಡುವಂತಾಗಬೇಕು. ಗೊಲ್ಲರ ಪಂಪಾಪತಿ ಮೆಣಸಿನಕಾಯಿ ಬೆಳೆಗಾರ ಕಣ್ವಿ ತಿಮ್ಮಲಾಪುರ ನಿರಂತರ ಚಿಲ್ಲಿ ಬೆಳೆಯದೆ ತೊಗರಿ, ಜೋಳ ಸೇರಿ ಬೆಳೆ ಪರಿವರ್ತನೆ ಮಾಡಬೇಕು. ಸಸಿ ನಾಟಿ ನಂತರ ಎರಡೂವರೆ ತಿಂಗಳಲ್ಲಿ ಮುಂಬರುವ ರೋಗ ನಿಯಂತ್ರಣಕ್ಕೆ ನೀಲಿ, ಹಳದಿ ಟ್ರಾಪ್ಸ್ ಬಳಸಬೇಕು. ಅಂತರಬೆಳೆಯಾಗಿ ಚೆಂಡು ಹೂ, ಕಾವಲು(ಬ್ಯಾರಿಯರ್)ಬೆಳೆಯಾಗಿ 3ಅಥವಾ 5ಸಾಲು ಮೆಕ್ಕೆಜೋಳ ಬೆಳೆಯಬೇಕು. ಎಸ್.ಸಂತೋಷ್ ಸಪ್ಪಂಡಿ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ, ಬಳ್ಳಾರಿ