ಕಂಪ್ಲಿ : ರೈತರು ರಸ್ತೆ ಮೇಲೆ ಭತ್ತ ರಾಶಿ ಮಾಡುತ್ತಿದ್ದು, ವಾಹನ ಸವಾರರು ವಾಹನ ಚಾಲನೆಯಲ್ಲಿ ಜಾಗೂರುಕತೆ ವಹಿಸಬೇಕಿದೆ.
ಈ ಬಾರಿ ಭತ್ತ ಬೆಳೆದ ರೈತ ಬಸವಳಿದು ಹೋಗಿದ್ದಾನೆ. ಮಳೆ, ರೋಗ ರುಜಿನಿ ಕಾಟದಿಂದ ಹೇಗೋ ಪಾರಾಗಿ ಕೊಯ್ಲು ಹಂತಕ್ಕೆ ಬಂದಿದ್ದು, ಕೊಯ್ಲು ಯಂತ್ರ ದೊರಕದ ಕಾರಣ ಪರದಾಡುತ್ತಿದ್ದಾರೆ. ಕೊಯ್ಲು ಯಂತ್ರ ಬಾಡಿಗೆಯೂ ಗಗನಕ್ಕೇರಿದ್ದರೂ ಯಂತ್ರ ಮಾಲೀಕರು ಕೇಳಿದಷ್ಟು ಹಣ ನೀಡಿದರೂ ಕೊಯ್ಲು ಯಂತ್ರ ದೊರಕುತ್ತಿಲ್ಲ.
ಭತ್ತ ಖರೀದಿ ಕೇಂದ್ರ ಪ್ರಕ್ರಿಯೆ ಆರಂಭಗೊಂಡಿದ್ದರೂ ಅದಿನ್ನು ಭತ್ತ ಖರೀದಿ ನೋಂದಣಿಗೆ ಮಾತ್ರ ಸೀಮಿತವಾಗಿದ್ದರಿಂದ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲಿಚ್ಚಿಸುವ ರೈತರು ಜ.1ರತನಕ ಭತ್ತ ರಾಶಿ ಜತನ ಮಾಡಬೇಕಿದೆ. ಕೆಲ ರೈತರು ಭತ್ತ ರಾಶಿಗೆ ರಸ್ತೆಯನ್ನೇ ನೆಚ್ಚಿಕೊಂಡಿದ್ದಾರೆ.
ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಖರೀದಿ ಆರಂಭಗೊಂಡಲ್ಲಿ ಮಾತ್ರ ರಾಶಿ ಹಾಕುವುದು ತಪ್ಪುತ್ತದೆ. ಭತ್ತ ದರ ಕುಸಿತಗೊಂಡಿದೆ. ಭತ್ತ ಕೊಳ್ಳುಗರು ಭತ್ತ ಕೊಳ್ಳಲು ಮುಂದೆ ಬರುತ್ತಿಲ್ಲ. ತಂದ ಸಾಲಕ್ಕೆ ಕೂಡಲೇ ಭತ್ತ ಮಾರಾಟ ಮಾಡುವಂತಹ ಸ್ಥಿತಿಯಿದೆ. ನವೆಂಬರ್‌ನಲ್ಲಿ ಭತ್ತ ಖರೀದಿ ಆರಂಭಗೊಂಡಲ್ಲಿ ರೈತರು ಭತ್ತ ರಾಶಿ ಹಾಕುವ ಪ್ರಮೇಯದಿಂದ ತಪ್ಪಬಹುದು ಎಂದು ರೈತರು ಹೇಳುತ್ತಾರೆ. ರೈತರು ರಸ್ತೆ ಮೇಲೆ ಭತ್ತ ರಾಶಿ ಹಾಕಬಾರದು. ಕೃಷಿ ಚಟುವಟಿಕೆಗಳನ್ನು ಗದ್ದೆಯಲ್ಲಿ ನಡೆಸಿದಲ್ಲಿ ಮಣ್ಣಿನ ಫಲವತ್ತತೆ ಸುಧಾರಣೆ ಆಗುತ್ತದೆ. ರಸ್ತೆ ಮೇಲೆ ರಾಶಿ ಹಾಕುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಡಾ.ಸಿ.ಎಂ.ಕಾಲಿಬಾವಿ ಮುಖ್ಯಬೇಸಾಯ ತಜ್ಞ, ಸಿರಗುಪ್ಪ .