ಜಿಲ್ಲೆ

ರೈತರ ದಶಕದ ಕನಸು ನನಸಾಗಿದೆ

ವಸಂತಕುಮಾರ್ ಬಿ

ನುಗ್ಗೇಹಳ್ಳಿ: ನನ್ನ ಹುಟ್ಟೂರು ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಸರ್ಕಾರಗಳು ಅನುಷ್ಠಾನಗೊಳಿಸುವ ಮೂಲಕ ಈ ಭಾಗದ ರೈತರ ದಶಕದ ಕನಸು ಈಡೇರಿದೆ ಎಂದು ಸರಸ್ವತಿ ಸಮ್ಮಾನ್ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದರು.

ಹೋಬಳಿಯ ಸಂತೇಶಿವರ ಗ್ರಾಮದಲ್ಲಿ ಭಾನುವಾರ ಭೈರಪ್ಪ ಅಭಿಮಾನಿಗಳು ಆಯೋಜಿಸಿದ್ದ ಕೃತಜ್ಞತಾರ್ಪಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜು ಬೊಮ್ಮಾಯಿ ಅವರ ಸಹಕಾರದಿಂದ ಯೋಜನೆಗೆ ಅನುಮೋದನೆ ದೊರೆಯಿತು. ಇಂದಿನ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಯೋಜನೆಗೆ ಹಣ ಬಿಡುಗಡೆ ಮಾಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಪಕ್ಷಾತೀತವಾಗಿ ಸಹಕರಿಸಿದ್ದಾರೆ. ಇದರಿಂದ ಈ ಭಾಗದ ರೈತರ ದಶಕದ ಕನಸು ಈಡೇರಿದೆ. ನಾನು ನನ್ನ ಹುಟ್ಟೂರಿನ ಜನರಿಗೆ ಶಾಶ್ವತ ನೀರಾವರಿ ಯೋಜನೆ ತರಬೇಕು ಎನ್ನುವ ಉದ್ದೇಶದಿಂದ ಸಂಬಂಧಿಸಿದವರಿಗೆ ಹತ್ತಾರು ಬಾರಿ ಮನವಿ ಮಾಡಿ ಒತ್ತಡ ಹಾಕಿದ್ದೇನೆ. ಈ ವರ್ಷದ ಹಂಗಾಮಿನಿಂದಲೇ ಗ್ರಾಮದ ಕೆರೆಗೆ ನೀರು ಬರುತ್ತಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ, ಈ ಹಿಂದೆ ನಾನು ನೀರಾವರಿ ಸಚಿವನಾಗಿದ್ದ ಸಂದರ್ಭ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭೈರಪ್ಪ ಅವರ ಮನವಿಯಂತೆ ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಸುಮಾರು 25 ಕೋಟಿ ರೂ. ಅನುದಾನ ನೀಡಲಾಗಿತ್ತು. ಭೈರಪ್ಪ ಅವರು ತಮ್ಮ ಕುಟುಂಬಕ್ಕಾಗಿ ಏನನ್ನೂ ಕೇಳಲಿಲ್ಲ. ಗ್ರಾಮದ ಜನರ ಅನುಕೂಲಕ್ಕಾಗಿ ಕೆರೆ ತುಂಬಿಸುವ ಯೋಜನೆಗೆ ಹಣ ನೀಡಿ ಎಂದು ಮನವಿ ಮಾಡಿದ್ದರು ಎಂದರು. ಇದರಿಂದಲೇ ಅವರ ವ್ಯಕ್ತಿತ್ವ ತಿಳಿಯುತ್ತದೆ. ನಾನು ಓದುವಾಗಲೇ ಪರ್ವ ಕಾದಂಬರಿ ಒಮ್ಮೆ ಓದಿದೆ. ಅರ್ಥವಾಗದೆ 3 ಬಾರಿ ಓದಿ ಸರ್ವಕಾಲದ ಸತ್ಯ ತಿಳಿದುಕೊಂಡೆ ಎಂದು ಹೇಳಿದರು.

ಡಾ.ಎಸ್.ಎಲ್.ಭೈರಪ್ಪ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಇವರ ಹಲವಾರು ಕೃತಿಗಳನ್ನು ನಾನು ಓದಿದ್ದೇನೆ. ತಮ್ಮ ಕೃತಿಗಳಲ್ಲಿ ಹುಟ್ಟೂರಿನ ಬಾಲ್ಯದ ಜೀವನದ ಬಗ್ಗೆ ಈ ಭಾಗದ ಸಂಸ್ಕೃತಿಯ ಬಗ್ಗೆ ಹೆಚ್ಚು ಗಮನ ಸೆಳೆದಿದ್ದಾರೆ. ಅವರ ಸಾಹಿತ್ಯ ಲೋಕದ ಪಯಣ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ವಿಶ್ವ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರಿಗೆ ‘ಭಗೀರಥ ಸ್ವರೂಪಿ ನಮ್ಮ ಭೈರಪ್ಪ, ನಮ್ಮ ಹೆಮ್ಮೆ’ ಎಂಬ ಬಿರುದು ನೀಡುವ ಮೂಲಕ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ. ಅವರ ಹೆಚ್ಚಿನ ಕಾಳಜಿಯಿಂದ ಈ ಯೋಜನೆ ಅನುಷ್ಠಾನಗೊಂಡಿದ್ದು, ಸುಮಾರು 11 ಕಿ.ಮೀ.ನಿಂದ ಪೈಪ್ ಲೈನ್ ಮೂಲಕ ನೀರನ್ನು ತಂದು ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನೀರು ಹರಿಸಲಾಗಿದೆ. ಈ ಯೋಜನೆಯು ಶಾಶ್ವತವಾಗಿದ್ದು, ಮುಂದಿನ ತಲೆಮಾರಿನವರು ಈ ಯೋಜನೆಯನ್ನು ನೆನೆಯುತ್ತಾರೆ. ಈ ಯೋಜನೆಗೆ ಡಾ.ಎಸ್.ಎಲ್. ಭೈರಪ್ಪ ಏತ ನೀರಾವರಿ ಯೋಜನೆ ಎಂದು ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭೈರಪ್ಪ ಅವರು ಮೈಸೂರಿನಲ್ಲಿ ಇರುವುದರಿಂದ ಮೈಸೂರಿನವರೇ ಎಂದುಕೊಂಡಿದ್ದೆ. ಆದರೆ ಅವರ ಹುಟ್ಟೂರು ಸಂತೇಶಿವರ ಗ್ರಾಮ. ಅವರು ತಮ್ಮ ಸಾಹಿತ್ಯದಲ್ಲಿ ಧರ್ಮ ಹಾಗೂ ಸಂಸ್ಕೃತಿ ಬಗ್ಗೆ ಉಲ್ಲೇಖಿಸಿದ್ದಾರೆ. ಜತೆಗೆ ರಾಜರ ಆಳ್ವಿಕೆಯ ಬಗ್ಗೆಯೂ ತಮ್ಮ ಕಾದಂಬರಿಗಳಲ್ಲಿ ಬರೆದಿದ್ದಾರೆ. ಅವರ ನಿಸ್ವಾರ್ಥ ಸೇವೆ ಗುರುತಿಸುವ ಮೂಲಕ ಗ್ರಾಮದ ವತಿಯಿಂದ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ ಮಾತನಾಡಿ, ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆ ದೊರೆತಿತ್ತು. ಆದರೆ ಈಗಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸುಮಾರು 25 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಯೋಜನೆ ಸಂಪೂರ್ಣಗೊಳ್ಳಲು ಸಹಕಾರ ನೀಡಿದ್ದಾರೆ. ಈ ಯೋಜನೆಗೆ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.

ಯೋಜನೆಗೆ ಕಾರೇಹಳ್ಳಿ ಸಮೀಪ ಪೈಪ್‌ಲೈನ್ ಕಾಮಗಾರಿ ನಡೆಸಲು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಎಸ್.ಎಲ್.ಭೈರಪ್ಪ ಅವರು ರೈತರಿಗೆ ಮನವಿ ಮಾಡುವ ಮೂಲಕ ಸಹಕಾರ ನೀಡುವಂತೆ ಕೋರಿದರು. ನಾನು ಹಾಗೂ ಕ್ಷೇತ್ರದ ಶಾಸಕರು ರೈತರೊಂದಿಗೆ ಮಾತುಕತೆ ನಡೆಸುವ ಮೂಲಕ ಮನವೊಲಿಸಿದ್ದೆವು. ಈಗ ಯೋಜನೆ ಪೂರ್ಣಗೊಂಡು ಕೆರೆಗೆ ನೀರು ಬಂದಿರುವುದು ಸಂತಸದ ವಿಚಾರ ಎಂದರು. ಸಂಸದ ಶ್ರೇಯಸ್ ಪಟೇಲ್, ಪತ್ರಕರ್ತ ವಿಶ್ವೇಶ್ವರ ಭಟ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಿಪಟೂರು ಶಾಸಕ ಷಡಕ್ಷರಿ, ಉದ್ಯಮಿ ರಮಣಶ್ರೀ ಷಡಕ್ಷರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಭೈರಪ್ಪ ಅವರ ಪುತ್ರ ಉದಯಶಂಕರ್, ಅಭಿನಂದನಾ ಕಾರ್ಯಕ್ರಮದ ಸಂಚಾಲಕ ಕೃಷ್ಣಪ್ರಸಾದ್, ಚನ್ನರಾಯಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಜಿಪಂ ಮಾಜಿ ಸದಸ್ಯ ಎಂ.ಎ.ರಂಗಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಪಟೇಲ್ ರಾಜಣ್ಣ, ಗ್ರಾಪಂ ಅಧ್ಯಕ್ಷೆ ಗೀತಾ ಸೋಮಶೇಖರ್, ಸದಸ್ಯ ಮಧು ಪಟೇಲ್, ಶರಣ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಎಸ್. ಜಿ. ಚಿರಂಜೀವಿ, ತಾಲೂಕು ಕಸಾಪ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಹೋಬಳಿ ಅಧ್ಯಕ್ಷ ದೊರೆಸ್ವಾಮಿ, ಪಿಎಸ್‌ಐ ಭರತ್ ರೆಡ್ಡಿ ಇತರರು ಇದ್ದರು.

ಪೂರ್ಣಕುಂಭ ಸ್ವಾಗತ: ನುಗ್ಗೆಹಳ್ಳಿ ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ನಿಂದ ಡಾ.ಎಸ್ ಎಲ್ ಭೈರಪ್ಪ ದಂಪತಿಯನ್ನು ಪೂರ್ಣ ಕುಂಭದೊಂದಿಗೆ ಅಲಂಕೃತ ಬೆಳ್ಳಿ ರಥದಲ್ಲಿ ಕಲಾತಂಡಗಳ ಜತೆಗೆ ಸಂತೇ ಶಿವರ ಗ್ರಾಮಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಅಲ್ಲದೆ ಭೈರಪ್ಪ ಅವರ ಕೃತಿಗಳ ಟ್ಯಾಬ್ಲೋಗಳ ಮೆರವಣಿಗೆಯು ಗಮನ ಸೆಳೆಯಿತು. ಕಾರ್ಯಕ್ರಮದ ವೇದಿಕೆ ಮುಂಭಾಗ ಕೃತಿಗಳ ಮಾರಾಟ ಮಳಿಗೆಯನ್ನೂ ತೆರೆಯಲಾಗಿತ್ತು.