ಜಿಲ್ಲೆ

31ರಂದು ರೈತ ದಿನಾಚರಣೆ

ಪ್ರಸಿನ್ ಕೆ.ಆರ್

ಗುಂಡ್ಲುಪೇಟೆ: ಮೈಸೂರಿನ ಕಲಾಮಂದಿರದಲ್ಲಿ ಡಿ. 31ರಂದು ವಿಶ್ವ ರೈತ ದಿನಾಚರಣೆ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ, ಕೃಷಿ ಅರಣ್ಯ ಹಾಗೂ ಸಕ್ಕರೆ ಖಾತೆಗಳ ಸಚಿವರು ರೈತ ದಿನಾಚರಣೆಯ ಹಬ್ಬದಲ್ಲಿ ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಮಾವೇಶದಲ್ಲಿ ರೈತರ ವಿವಿಧ ಹಕ್ಕು ಒತ್ತಾಯಗಳಾದ ರೈತರ ಸಂಪೂರ್ಣ ಸಾಲಮನ್ನಾ, ಸ್ವಾಮಿನಾಥನ್ ವರದಿಯ ಜಾರಿ, ಪ್ರತಿ ಟನ್ ಕಬ್ಬಿಗೆ 5,500 ಬೆಲೆ ನಿಗದಿ, ಕಳೆದ ಸಾಲಿನ 950 ಕೋಟಿ ರೂ.ನಷ್ಟು ಕಬ್ಬಿನ ಬಾಕಿ ಕೊಡಿಸುವುದು, ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆಯ ಮರು ಜಾರಿ, ಭತ್ತದ ಬೆಲೆ ಕುಸಿತವಾಗಿದ್ದು, ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರದ ಎಂಎಸ್‌ಪಿ ಜತೆ ರಾಜ್ಯ ಸರ್ಕಾರ 500 ರೂ. ಹೆಚ್ಚುವರಿ ಪ್ರೋತ್ಸಾಹ ಧನ, ವಕ್ಫ್ ದಾಖಲೆ ರದ್ದತಿ, ಉಳುವ ರೈತನಿಗೆ ಭೂಮಿಯ ಒಡೆತನದ ಹಕ್ಕು, ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಹೊಂದುವ ರೈತರ ಕುಟುಂಬಕ್ಕೆ ವೈಜ್ಞಾನಿಕ ಬೆಳೆ ನಷ್ಟ, ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ರಾಜಣ್ಣ, ಬೆಟ್ಟದ ಮಾದಹಳ್ಳಿ ಶ್ರೀನಿವಾಸ್, ಮಹದೇವನಾಯಕ, ಗುರುಸ್ವಾಮಿ, ಗೋವಿನಾಯ್ಕ, ಮಹದೇವಯ್ಯ, ಶ್ರೀನಿವಾಸ್, ಸಿದ್ದರಾಜು ನಟರಾಜ್ ಇತರರು ಇದ್ದರು.