ನರಗುಂದ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸರ್ಕಾರದಲ್ಲಿ ಘೊಷಿಸಿದ್ದ ಸಾಲ ಮನ್ನಾ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ರೈತರಿಗೆ ಯೋಜನೆ ಲಾಭ ಸಮರ್ಪಕವಾಗಿ ದೊರೆತಿಲ್ಲ. ಇದರಿಂದ ಬಹುತೇಕ ರೈತರು ವಿನಾಕಾರಣ ಬ್ಯಾಂಕ್ ಮತ್ತು ಕಚೇರಿಗಳಿಗೆ ಅಲೆಯುವಂತಾಯಿತು ಎಂದು ರೈತ ಸೇನಾ ಕರ್ನಾಟಕ ಸಂಘಟನೆ ವಕ್ತಾರ ಗುರು ರಾಯನಗೌಡ್ರ ಹೇಳಿದರು.
ಮಹದಾಯಿ, ಕಳಸಾ-ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ಪಟ್ಟಣದಲ್ಲಿ ನಡೆಸುತ್ತಿರುವ 1986ನೇ ದಿನದ ಹೋರಾಟ ವೇದಿಕೆಯಲ್ಲಿ ಹುತಾತ್ಮ ರೈತರಿಗೆ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ರಾಜ್ಯದ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು. ಹೀಗಾಗಿ 2017ರಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದ ಎಲ್ಲ ರೈತರು ವಿವಿಧ ಬ್ಯಾಂಕ್ಗಳಲ್ಲಿ ಪಡೆದಿರುವ 2 ಲಕ್ಷ ರೂಪಾಯಿ ಸುಸ್ತಿ ಬೆಳೆ ಸಾಲ ಮನ್ನಾ ಮಾಡುವಂತೆ ಹಾಗೂ ಸಕಾಲದಲ್ಲಿ ಬೆಳೆ ಸಾಲ ಮರು ಪಾವತಿಸಿರುವ ರೈತರಿಗೆ 25 ಸಾವಿರ ರೂ. ಪೋ›ತ್ಸಾಹ ಧನ ನೀಡಲು ಆದೇಶಿಸಿತ್ತು. ಆದರೆ, ಕೆಲ ಅನವಶ್ಯಕ ದಾಖಲೆಗಳನ್ನು ಕೇಳಿದ್ದರಿಂದ, ಹೆಸರು ಮತ್ತು ವಿಳಾಸ ಒಂದಕ್ಕೊಂದು ಹೊಂದಾಣಿಕೆಯಾಗದೆ ನರಗುಂದ ತಾಲೂಕಿನ 9,049, ಗದಗ ತಾಲೂಕಿನ 18,000, ರೋಣದ ತಾಲೂಕಿನ 10,000, ಶಿರಹಟ್ಟಿಯ 8,000, ಮುಂಡರಗಿ ತಾಲೂಕಿನ 8,000 ರೈತರು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿದ್ದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಾಲಮನ್ನಾ ಅವಧಿ ವಿಸ್ತರಿಸಿತ್ತಾದರೂ ರೈತರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ರಾಜ್ಯದ ಲಕ್ಷಾಂತರ ರೈತರು ಸಾಲಮನ್ನಾ ಯೋಜನೆಯಿಂದ ವಂಚಿತರಾಗಿದ್ದರು. ಈ ಬಗ್ಗೆ ರೈತಸೇನಾ ಸಂಘಟನೆ ಸದಸ್ಯರು ಗದಗ, ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡಿದ್ದರಿಂದ ಅ. 25ರಿಂದ ಸಾಲ ಮನ್ನಾ ಅವಧಿ ವಿಸ್ತರಿಸಿದೆ. ರೈತರು ರೇಷನ್ ಕಾರ್ಡ್ ನವೀಕರಣ ಮಾಡಿಸಿಕೊಂಡಿದ್ದರೆ ಅಂತಹವರಿಗೆ ಕೆಲವೊಂದು ದಾಖಲಾತಿ ಸಮಸ್ಯೆಗಳಿಂದ ವಿನಾಯ್ತಿ ನೀಡುವಂತೆ (ಟಿಎಲ್ಸಿ) ತಾಲೂಕು ಲೆವೆಲ್ ಕಮಿಟಿಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಸಾಲ ಮನ್ನಾ ವ್ಯಾಪ್ತಿಗೆ ಒಳಪಡುವ ರೈತರು ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್ಗಳಿಗೆ ತೆರಳಿ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಎಸ್.ಬಿ. ಜೋಗಣ್ಣವರ ಮಾತನಾಡಿದರು. ಮಲ್ಲಣ್ಣ ಅಲೇಕಾರ, ಅರ್ಜುನ ಮಾನೆ, ಪರಮೇಶ ಅಣ್ಣಿಗೇರಿ, ಉಮೇಶ ಬಾರಕೇರ, ರಾಮು ಸಾಬಳೆ, ಯಲ್ಲಪ್ಪ ಗುಡದರಿ, ಫಕೀರಪ್ಪ ಅಣ್ಣಿಗೇರಿ, ಸೋಮು ಬೆಂಗೇರಿ, ಲಕ್ಷ್ಮಪ್ಪ ಪವಾರ, ಚನ್ನಪ್ಪಗೌಡ ಪಾಟೀಲ, ಹನಮಂತ ಸರನಾಯ್ಕರ, ವಾಸು ಚವ್ಹಾಣ, ಇತರರಿದ್ದರು.
ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ
ಗಜೇಂದ್ರಗಡ: ರೈತರ ದಿನಾಚರಣೆ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮಿಜಿ ಜನ್ಮದಿನ ನಿಮಿತ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ಕಸೇವಾ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 128 ಜನ ರಕ್ತದಾನ ಮಾಡಿದರು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠವಾಗಿದ್ದು ಮತ್ತೊಂದು ಜೀವ ಉಳಿಸಿದ ಶ್ರೇಯಸ್ಸು ರಕ್ತದಾನಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಎಚ್.ಎಸ್.ಸೋಂಪುರ ಮಾತನಾಡಿ, ಎಲ್ಲ ಆರೋಗ್ಯವಂತರು ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮುಂದಾಗಬೇಕು. ರಕ್ತ ದಾನ ಪವಿತ್ರ ಕಾರ್ಯ ಎಂದರು.
ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಕೊಪ್ಪ, ಬಿ.ಎಂ.ಸಜ್ಜನರ, ಅಶೋಕ ಬಾಗಮಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಸದಸ್ಯರಾದ ಸುಭಾಸ ಮ್ಯಾಗೇರಿ, ರಾಜು ಸಾಂಗ್ಲಿಕರ ಹಾಗೂ ಡಾ.ಪಾರ್ವತಿಬಾಯಿ ಚವಡಿ, ಟಿ.ಎಸ್.ರಾಜೂರ, ಎ.ಡಿ.ಕೋಲಕಾರ, ಪ್ರಭು ಚವಡಿ, ಶರಣಪ್ಪ ಕಂಬಳಿ, ಬಿ.ಎಸ್. ಬಸವನಗೌಡ್ರ, ಚಂಬಣ್ಣ ಚವಡಿ, ಶರಣಪ್ಪ ಹಿರೇಕೊಪ್ಪ, ವೀರೇಶ ಸಂಗಮದ, ಅಂಬ್ರೇಶ ಚವಡಿ ಇತರರು ಇದ್ದರು.
ಸಾಲ ಸೌಲಭ್ಯದ ಸದುಪಯೋಗಕ್ಕೆ ಸಲಹೆ
ಮುಂಡರಗಿ: ರೈತರು ಬ್ಯಾಂಕ್ನಲ್ಲಿ ಸಿಗುವ ಸೌಲಭ್ಯಗಳ ಸದುಪಯೋಗ ಮಾಡಿಕೊಂಡು ಬ್ಯಾಂಕ್ ಜತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಕೊಪ್ಪಳದ ಎಸ್ಬಿಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆ. ಶಿವಕುಮಾರ ಹೇಳಿದರು.
ರೈತ ದಿನಾಚರಣೆ ಅಂಗವಾಗಿ ಪಟ್ಟಣದ ಎಸ್ಬಿಐ ಶಾಖೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಯಾಂಕ್ನಲ್ಲಿ ಬೆಳೆಸಾಲ ಪಡೆದು ಪ್ರತಿ ವರ್ಷ ಸರಿಯಾಗಿ ನವೀಕರಣ ಮಾಡಿಕೊಂಡು ಬಂದ ಐವರು ರೈತರನ್ನು ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಬರದೂರ ಗ್ರಾಮದ ಹಾಲು ಉತ್ಪಾದಕ ರೈತರಿಗೆ ತಲಾ 28 ಸಾವಿರ ರೂ.ನಂತೆ 50 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು.
ಎಸ್ಬಿಐ ಬ್ಯಾಂಕ್ ವ್ಯವಸ್ಥಾಪಕಿ ರಶ್ಮಿ ಎಸ್., ನಾರಾಯಣಪ್ಪ ಇಲ್ಲೂರ, ಗೋವಿಂದರಾಜ ಹೆಗ್ಗಡಾಳ, ಸಣ್ಣಯಲ್ಲಪ್ಪ ಹುಲಗೇರಿ, ಶೇಖಪ್ಪ ಅನ್ವಾಲ್, ಈಶ್ವರಪ್ಪ ಹಿರೇಗೌಡ್ರ, ಮಹೇಶ ಸಜ್ಜನರ, ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.