ಮುಂಡಗೋಡ: ತಾಲೂಕಿನ ಅಂದಲಗಿ ಹಾಗೂ ಕಲ್ಲಳ್ಳಿ ಭಾಗದಲ್ಲಿ ಕಳೆದ ಮೂರುದಿಂದ ಪ್ರತಿದಿನ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಬೆಳೆ ನಾಶ ಪಡಿಸುತ್ತಿದ್ದು ಇದರಿಂದ ಈ ಭಾಗದ ರೈತರು ಅಪಾರ ಪ್ರಮಾಣದ ಹಾನಿ ಅನುಭವಿಸುವಂತಾಗಿದೆ.
ಐದು ಕಾಡಾನೆಗಳು ಅಂದಲಗಿ ಹಾಗೂ ಕಲ್ಲಳ್ಳಿ ಭಾಗದಲ್ಲಿ ದಾಳಿ ನಡೆಸುತ್ತಿದ್ದು ಈ ಭಾಗದಲ್ಲಿನ ಭತ್ತ ಹಾಗೂ ಕಬ್ಬು ಬೆಳೆಯನ್ನು ನಾಶ ಪಡಿಸುತ್ತಿವೆ.
ಗದ್ದೆಯಲ್ಲಿ ಕಟಾವು ಮಾಡಿ ಹಾಕಿದ ಭತ್ತದ ಬಣವೆಯನ್ನು ಕಿತ್ತು ಹಾಕುತ್ತಿವೆ ಹಾಗೂ ಕಬ್ಬಿನ ಗದ್ದೆಗಳಿಗೆ ದಾಳಿ ನಡೆಸಿ ಬೆಳೆ ತಿಂದು ಹೋಗುತ್ತಿದ್ದು ಇದರಿಂದ ಈ ಭಾಗದ ರೈತರು ಹಾನಿ ಅನುಭವಿಸುವಂತಾಗಿದೆ. ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಾಡಾನೆಗಳು ಒಂದೆ ರಾತ್ರಿ ನಾಶ ಪಡಿಸುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ರೈತರು ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದು ಪ್ರತಿದಿನವೂ ಸಹ ರೈತರು ಕಾಡಾನೆಗಳನ್ನು ಕಾಯುವ ಕೆಲಸವಾಗಿದೆ. ಈ ಭಾಗದಲ್ಲಿ ಅರಣ್ಯ ಅತಿಕ್ರಮಣ ಭೂಮಿಯೆ ಹೆಚ್ಚಾಗಿದ್ದು ಇದರಿಂದ ಕಾಡಾನೆಗಳಿಂದ ಬೆಳೆ ಹಾನಿ ಅನುಭವಿಸಿದ ರೈತರಿಗೆ ಪರಿಹಾರ ಸಹ ಸಿಗುವು ದಿಲ್ಲ ಅಪಾರ ಪ್ರಮಾಣದ ಹಾನಿ ಅನುಭವಿಸಿದ ನಮಗೂ ಸಹ ಅರಣ್ಯ ಇಲಾಖೆಯವರು ಬೆಳೆ ಪರಿಹಾರ ನೀಡಬೇಕು ಎಂಬುದು ಈ ಭಾಗದ ಅತಿಕ್ರಮಣದಾರ ರೈತರ ಆಗ್ರಹವಾಗಿದೆ.