ಜಿಲ್ಲೆ

ರೈತರ ಪರಿಹಾರ ಧನ ರಾಜಕಾರಣಿಗಳ ಹಿಂಬಾಲಕರ ಪಾಲು: ಬಡಗಲಪುರ ನಾಗೇಂದ್ರ ಆರೋಪ

ಮೈಸೂರು: ಚಿತ್ರನಗರಿ ನಿರ್ಮಾಣಕ್ಕಾಗಿ ವರುಣ ಕ್ಷೇತ್ರದ ಹಿಮ್ಮಾವು ಗ್ರಾಮದ ಬಳಿ ಭೂಮಿ ವಶಪಡಿಸಿಕೊಂಡಿರುವ ರೈತರಿಗೆ ಪರಿಹಾರ ದೊರೆಯದೆ ರಾಜಕಾರಣಿಗಳ ಹಿಂಬಾಲಕರಿಗೆ ನೀಡಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಚಿತ್ರನಗರಿಗೆ ಭೂಮಿ ನೀಡಿದವರು ಅನ್ಯಾಯವಾಗಿದೆ ಎಂದು ನಡೆಸುತ್ತಿರುವ ಹೋರಾಟ 125ನೇ ದಿನಕ್ಕೆ ಕಾಲಿಟ್ಟಿದೆ. ಕೆಐಎಡಿಬಿ ಹೆಚ್ಚುವರಿಯಾಗಿ ತಲಾ ನಾಲ್ಕು ಲಕ್ಷ ರೂ.ನಂತೆ 18 ಕೋಟಿ ರೂ. ಬಿಡುಗಡೆಗೊಳಿಸಿದೆ. ಆದರೆ ನಂಜನಗೂಡು ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಭೂಮಿ ಕಳೆದುಕೊಂಡವರಿಗೆ ಹಣ ನೀಡದೆ ರಾಜಕೀಯ ಹಿಂಬಾಲಕರಿಗೆ ನೀಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಇದರ ತನಿಖೆ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿ ತಿಂಗಳು ಕಳೆದರೂ ಯಾವುದೇ ತನಿಖಾ ವರದಿ ಬಿಡುಗಡೆಯಾಗಿಲ್ಲ. ಇದರಿಂದ ನಿಜವಾದ ರೈತರಿಗೆ ಪರಿಹಾರ ದೊರೆತಿಲ್ಲ. ಹೀಗಾಗಿ ಸೆ.8ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗುವುದು. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಹಲವು ರೈತರ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ಇದರೊಡನೆ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸರ್ಕಾರ ಮುಂದಾಗಿದ್ದು, ಇದನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಆಯ್ಕೆಯನ್ನು ಎಲ್ಲರೂ ಘನತೆಯಿಂದ ಸ್ವೀಕರಿಸಬೇಕಾಗಿತ್ತು. ಹಿಂದೂ ಧರ್ಮವನ್ನು ಅವರು ವಿರೋಧಿಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಧರ್ಮವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ. ಕುವೆಂಪು ಹಾಗೂ ಅಂಬೇಡ್ಕರ್ ಸಹ ಇದನ್ನೇ ಮಾಡಿದ್ದರು. ಹೀಗಾಗಿ ಸಂಕುಚಿತ ಮನಸ್ಥಿತಿಯಿಂದ ವಿರೋಧಿಸುವುದು ಸರಿಯಲ್ಲ ಎಂದರು.

ರೈತ ಚಳವಳಿಯಲ್ಲಿ ಮನವಿ ಸ್ವೀಕರಿಸಿದ ಡಿ.ಕೆ.ಶಿವಕುಮಾರ್, ಕೂಗಾಡುವುದೇ ಚಳವಳಿಯಲ್ಲ ಎಂಬ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ. ಅದರ ಬದಲು ಸರ್ಕಾರ ನಿಮ್ಮೊಂದಿಗಿದೆ ಎಂದು ಸೌಜನ್ಯದಿಂದ ಹೇಳಬಹುದಾಗಿತ್ತು. ಈ ರೀತಿ ಅವರು ಮಾತನಾಡುತ್ತಿರುವುದು ಇದೇ ಮೊದಲಲ್ಲ. ಹೀಗಾಗಿ ಸಿಎಂ ಅವರಿಗೆ ತಿಳಿಹೇಳಬೇಕೆಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ನಾಗನಹಳ್ಳಿ ವಿಜೇಂದ್ರ, ಪ್ರೇಮ್‌ರಾಜ್ ಇದ್ದರು.