ಶಿಡ್ಲಘಟ್ಟ: ಗೋಮಾಳ ಜಮೀನಿನಲ್ಲಿ ಸ್ವಾಧೀನದಲ್ಲಿರುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗಿದ್ದು ಕಾರ್ಯಾಚರಣೆ ವೇಳೆ ಪರಸ್ಪರ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ತಹಸೀಲ್ದಾರ್ ಗಗನ ಸಿಂಧು ಪೊಲೀಸರ ಸರ್ಪಗಾವಲಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರದೇಶಕ್ಕೆ ತೆರಳಿದ್ದು ಇದೇ ವೇಳೆಯ ಸ್ಥಳೀಯ ರೈತರು ಮತ್ತು ಮಹಿಳೆಯರು ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.
೫೦ ವರ್ಷಗಳಿಂದ ಸ್ವಾಧೀನದಲ್ಲಿದ್ದು ಇದರಿಂದಲೇ ಜೀವನ ನಡೆಯುತ್ತಿದೆ. ಸ್ವತಃ ಅರಣ್ಯ ಇಲಾಖೆಯ ಅಧಿಕಾರಿಗಳು ಗಿಡಗಳು ಕೊಟ್ಟು ತೋಟಗಳಲ್ಲಿ ಹಾಕಿಕೊಳ್ಳಲು ಹೇಳಿದ್ದರು. ಅದರಂತೆ ಗಿಡಗಳನ್ನು ಬೆಳೆಸಲಾಗಿದೆ. ಈಗ ಹಾಕಿರುವ ದುಡ್ಡು ಸಹ ನಮಗೆ ಕೊಟ್ಟಿಲ್ಲ. ಈಗ ನಮ್ಮ ಜಮೀನು ಸರ್ವೇ ಮಾಡಲು ಬಂದಿರೋದು ಎಷ್ಟರ ಮಟ್ಟಿಗೆ ಸರಿ? ಎಂದು ತಾಲ್ಲೂಕು ದಂಡಾಧಿಕಾರಿಗಳನ್ನು ಪ್ರಶ್ನಿಸಿದರು. ಸರ್ಕಾರಿ ಗೋಮಾಳದಲ್ಲಿ ನಾವು ಸ್ವಾಧೀನದಲ್ಲಿದ್ದೇವೆ. ಕಾನೂನಿನ ಪ್ರಕಾರ ಸಾಗುವಳಿ ಚೀಟಿ ನೀಡಲು ೫೧, ೫೩, ೫೭ ಅರ್ಜಿಗಳನ್ನು ಹಾಕಿಕೊಂಡಿದ್ದು. ಅರಣ್ಯ ಇಲಾಖೆಗೆ ಸಂಬಂಧಿಸಿದ ಯಾವುದಾದರೂ ದಾಖಲೆ ಇದ್ದರೆ, ಅವರ ಹೆಸರಿನಲ್ಲಿ ಆರ್.ಟಿ.ಸಿ ಬರುತ್ತದೆ. ಆದರೆ ಪಹಣಿಯಲ್ಲಿ ಯಾವುದು ಇಲ್ಲ, ಸರ್ವೇ ಯಾಕೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರರನ್ನು ರೈತರು ಪ್ರಶ್ನಿಸಿದರು.
ಯಾರು ಯಾವ ಬೆಳೆಗಳನ್ನು ಬೆಳೆದಿದ್ದಾರೆ, ಅರಣ್ಯ ಇಲಾಖೆಗಳು ಅಧಿಕಾರಿಗಳು ಗಿಡಗಳನ್ನು ನಾಟಿ ಮಾಡಿದ್ದಾರೆ ಎನ್ನುವುದನ್ನು ಪರಿಶೀಲಿಸೋಣ ಎಂದು ತಹಸೀಲ್ದಾರ್ ಹೇಳಿದಾಗ ವಿರೋಧ ವ್ಯಕ್ತವಾಯಿತು.
ಇದೇ ವೇಳೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ನಾನು ಯಾವುದೇ ಕಾರಣಕ್ಕೂ ರೈತ ವಿರೋಧಿ ನೀತಿಯನ್ನು ಅನುಸರಿಸುವುದಿಲ್ಲ. ರೈತರ ಪರವಾಗಿ ಇರ್ತೀನಿ ಎಂದು ಭರವಸೆ ನೀಡಿದ ಬಳಿಕ ಎಲ್ಲಾ ರೈತರು ಮತ್ತು ಮಹಿಳೆಯರು ಎದ್ದು ತಾವು ಸ್ವಾದೀನದಲ್ಲಿರುವ ಜಮೀನುಗಳನ್ನು ತಹಸೀಲ್ದಾರ್ ಗೆ ತೋರಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ.ಕೆ.ಅರುಣ್ ಕುಮಾರ್ ಮಾತನಾಡಿ, ೬೦ ವರ್ಷಗಳಿಂದ ರೈತರು ಇಲ್ಲಿ ಸಾಧೀನದಲ್ಲಿದ್ದಾರೆ, ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸ್ವತಃ ತಹಶೀಲ್ದಾರ್ ವೀಕ್ಷಣೆ ಮಾಡಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಕೇವಲ ಗಿಡ ನಾಟಿ ಮಾಡಲು ಅವಕಾಶ ಕೊಟ್ಟು ಜಮೀನೇ ನಮ್ಮದು ಅಂತ ಹೇಳಿಕೊಂಡು ಬಂದಿರೋದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಕಿಡಿಕಾರಿದರು.
ವೃತ್ತ ನಿರೀಕ್ಷಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಎಸ್ಐ ಶ್ಯಾಮಲಾ, ವೇಣುಗೋಪಾಲ್ ತಂಡ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿತ್ತು.