ಜಿಲ್ಲೆ

ಮಧ್ಯವರ್ತಿಗಳ ಹಾವಳಿ ತಪ್ಪಿಸಲು ರೈತ ಸಂತೆ ಆರಂಭ

ಲೋಕೇಶ್ ಮನು. ಡಿ

ಹನೂರು: ಸಂತೆಯಲ್ಲಿ ಸಿಗುವ ಹಣ್ಣು, ತರಕಾರಿ, ದವಸ ಧಾನ್ಯ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಖರೀದಿಸುವುದರ ಮೂಲಕ ರೈತರಿಗೆ ಸಹಕಾರ ನೀಡಬೇಕು ಎಂದು ಕೊಳ್ಳೇಗಾಲ ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಗೌಡೇಗೌಡ ತಿಳಿಸಿದರು.


ತಾಲೂಕಿನ ಮಾರ್ಟಳ್ಳಿ ಸಮೀಪದ ನಾಲ್‌ರೋಡ್ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ತಾಲೂಕು ರೈತ ಸಂಘದಿಂದ ರೈತರ ಸಂತೆಗೆ ಚಾಲನೆ ನೀಡಿ ಮಾತನಾಡಿ, 25 ವರ್ಷದ ಹಿಂದೆ ಕೃಷಿ ಮಾರುಕಟ್ಟೆ ಸಚಿವರಾಗಿದ್ದ ದಿ. ಎಚ್.ನಾಗಪ್ಪ ಅವರು ಗ್ರಾಮದಲ್ಲಿ ಕೃಷಿ ಮಾರುಕಟ್ಟೆ ಸಮಿತಿಯನ್ನು ಸ್ಥಾಪಿಸಿದ್ದರು. ಆದರೆ ರೈತರಿಗೆ ಪ್ರಯೋಜನವಾಗಿರಲಿಲ್ಲ. ಇದರಿಂದ ರೈತರು ಬೆಳೆದ ದವಸ ಧಾನ್ಯ, ಹಣ್ಣು, ತರಕಾರಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಬೇರೆಡೆ ಕೊಂಡೊಯ್ದು ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಮಧ್ಯವರ್ತಿಗಳ ಹಾವಳಿಯಿಂದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಗುರುವಾರ ಸಂತೆಯನ್ನು ಆರಂಭಿಸಲಾಗಿದೆ. ಇಲ್ಲಿ ತಾಜಾ ಹಣ್ಣು, ತರಕಾರಿ, ಸೊಪ್ಪು ಹಾಗೂ ಆಹಾರ ಪದಾರ್ಥಗಳ ಜತೆಗೆ ಕುರಿ, ಕೋಳಿ, ಮೇಕೆ ಹಾಗೂ ಹಸುಗಳನ್ನು ಮಾರಾಟ ಮಾಡಬಹುದಾಗಿದೆ. ಆದ್ದರಿಂದ ರೈತರು ಸಂತೆಯ ಪ್ರಯೋಜನ ಪಡೆದುಕೊಂಡು ವ್ಯಾಪಾರ ವಹಿವಾಟು ನಡೆಸುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸಂತೆಯಲ್ಲಿ ಸಿಗುವ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.


ರೈತ ಸಂಘ ಸ್ಥಾಪಿಸಿ:
ರೈತ ಸಂಘ ಕ್ರೀಯಾಶೀಲವಾಗಿದ್ದು, ಸಂಘಟನೆಯ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಿದೆ. ಆದ್ದರಿಂದ ಪ್ರತಿ ಗ್ರಾಮದಲ್ಲೂ ರೈತ ಸಂಘವನ್ನು ಸ್ಥಾಪಿಸಿಕೊಳ್ಳಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿದರು. ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಕಾರ್ಯದರ್ಶಿ ಪೂಂಗುಡಿ, ಮಾಜಿ ಸೈನಿಕ ಜೋಸೆಫ್, ರೈತ ಮುಖಂಡರಾದ ಆರೋಗ್ಯರಾಜು, ಅರ್ಪುತರಾಜು ಹಾಗೂ ಇನ್ನಿತರರು ಇದ್ದರು.