ಹನೂರು ತಾಲೂಕಿನ ಪುದು ರಾಮಾಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಕೊಟ್ಟ ರೈತರು ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮೀ ಅವರಲ್ಲಿ ಒತ್ತಾಯಿಸಿದರು.  
ಜಿಲ್ಲೆ

ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದ ರೈತರು!

ಹನೂರು: ತಾಲೂಕಿನ ಪುದು ರಾಮಾಪುರ ಗ್ರಾಮದಲ್ಲಿ ಮಂಗಳವಾರ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ರೈತರೇ ಹಿಡಿದು ಅಬಕಾರಿ ಇಲಾಖೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಲೂಕಿನ ರಾಮಾಪುರ ಗ್ರಾಮದ ಮಂಟೇಸ್ವಾಮಿ ಬಂಧಿತ ಆರೋಪಿ. ಗ್ರಾಮದ ಮಾರಮ್ಮನ ದೇವಸ್ಥಾನದ ಬಳಿ ಮಧ್ಯಾಹ್ನ 1.45ರಲ್ಲಿ ರೈತ ಸಂಘಟನೆಯ ತಾಲೂಕು ಪದಾಧಿಕಾರಿಗಳು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಗ್ರಾಮದ ಮನೆಯೊಂದಕ್ಕೆ ಈತ ಅಕ್ರಮವಾಗಿ ಮದ್ಯ ಸಾಗಣೆ ಮಾಡಲು ಬೈಕ್‌ನಲ್ಲಿ ತೆರಳುತ್ತಿದ್ದನು. ಈತನ ಬಗ್ಗೆ ಮೊದಲೇ ತಿಳಿದಿದ್ದ ರೈತರು ಆತನನ್ನು ಹಿಡಿದು ಅಬಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಅಬಕಾರಿ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮೀ ಹಾಗೂ ಸಿಬ್ಬಂದಿ ತಂಡ ಸ್ಥಳಕ್ಕೆ ಆಗಮಿಸಿದಾಗ ಆತನನ್ನು ಅವರ ವಶಕ್ಕೆ ನೀಡಿ 90 ಮಿ.ಲೀ.ನ 48 ಪೌಚ್‌ಗಳನ್ನು ನೀಡಿದರು. ಜತೆಗೆ ಲಿಖಿತವಾಗಿ ದೂರು ನೀಡಿದರು.