ನಂಜನಗೂಡು ತಾಲೂಕು ಕಚೇರಿ ಮುಂಭಾಗ ರಾಜ್ಯ ರೈತ ಸಂಘದ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಡಗಲಪುರ ನಾಗೇಂದ್ರ, ಶಿರಮಳ್ಳಿ ಸಿದ್ದಪ್ಪ, ಹೊಸಕೋಟೆ ಬಸವರಾಜು, ಹೆಜ್ಜಿಗೆ ಪ್ರಕಾಶ್, ಮಹೇಶ್, ಹೊಸೂರು ಕುಮಾರ್, ಅಂಕಪ್ಪ ಸೇರಿದಂತೆ ಇತರರು ಇದ್ದರು. 
ಜಿಲ್ಲೆ

ಮೈಕ್ರೋ ಫೈನಾನ್ಸ್ ವಿರುದ್ಧ ಸಿಡಿದೆದ್ದ ಅನ್ನದಾತರು

ವಸಂತಕುಮಾರ್ ಬಿ

ನಂಜನಗೂಡು: ನಂಜನಗೂಡು ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಬೇಕು, ವಿದ್ಯುತ್ ಅಕ್ರಮ- ಸಕ್ರಮ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬುಧವಾರ ರಾಜ್ಯ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ಉಳುಮೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.

ನಂಜನಗೂಡು ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಬೇಕು. ಅಕ್ರಮ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಬೇಕು. ಬಗರ್‌ಹುಕುಂ ಸಾಗುವಳಿಯನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಕೆರೆಕಟ್ಟೆ ಒತ್ತುವರಿ ತೆರವುಗೊಳಿಸಬೇಕು. ಕಾಡು ಪ್ರಾಣಿಗಳ ಉಪಟಳ ತಡೆಗಟ್ಟಬೇಕು. ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಕಬಿನಿ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ ನೀರು ಹರಿಸಬೇಕು. ಕಳೆದ 8 ತಿಂಗಳಿಂದ ಹಾಲು ಉತ್ಪಾದಕರಿಗೆ ಸಹಾಯಧನ ಸಿಕ್ಕಿಲ್ಲ. ಅದನ್ನು ಕೂಡಲೇ ಬಿಡುಗಡೆ ಗೊಳಿಸುವಂತೆ ಆಗ್ರಹಿಸಿದರು.

ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾಗಿದೆ. ಇದರ ಹಿಂದೆ ಖಾಸಗಿ ಮನಿ ಲ್ಯಾಂಡರಿಂಗ್ ಕೆಲಸ ಮಾಡುತ್ತಿದೆ. ಜತೆಗೆ ಕೆಲ ಧರ್ಮ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದೆ. ಆಧಾರ್ ಕಾರ್ಡ್, ಪಾಸ್ ಬುಕ್ ಎಲ್ಲವನ್ನು ಪಡೆದು ಸಾಲ ನೀಡುತ್ತಾರೆ. ಬಳಿಕ ಸಾಲ ಮರು ಪಾವತಿ ಸ್ವಲ್ಪ ತಡವಾದರೂ ಕಿರುಕುಳ ಕೊಡುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿ ಗ್ರಾಮದಲ್ಲೂ ಮೈಕ್ರೋ ಫೈನಾನ್ಸ್ ಗೆ ನಿರ್ಬಂಧ ಏರಿ ನಾಮಫಲಕಗಳನ್ನು ಹಾಕುತ್ತೇವೆ. ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್‌ನಿಂದ ರೈತರಿಗೆ ಕೊಡಲಾಗುತ್ತಿದ್ದ ಸಾಲಗಳನ್ನು ಕಡಿತಗೊಳಿಸಲಾಗಿದೆ. ಇದರ ವಿರುದ್ಧ ಇದೇ ತಿಂಗಳ 29ರಂದು ರಿಸರ್ವ್ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ ಮಾತನಾಡಿ, ರೈತರ ಅವಶ್ಯಕತೆಗಳಿಗೂ ಮೀರಿ ಸಾಲಗಳನ್ನು ಮೈಕ್ರೋ ಫೈನಾನ್ಸ್ ಕಂಪನಿಗಳು ಕೊಡುತ್ತಿವೆ. ತಾಲೂಕಿನ 198 ಹಳ್ಳಿಗಳಲ್ಲೂ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ನೀಡಿ ಕಿರುಕುಳ ನೀಡುತ್ತಿದೆೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸನೂರ ಮೂಲಕ ಮುಖ್ಯಮಂತ್ರಿಗೆ ರೈತರು ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕಾರ್ಯಾಧ್ಯಕ್ಷ ಮಹೇಶ್ ಪ್ರಭು, ನೇತ್ರಾವತಿ, ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಮಂಕರಯ್ಯ, ಉಪಾಧ್ಯಕ್ಷ ಎಸ್.ಅಂಕಪ್ಪ, ಕೌಲಂದೆ ಪರಮೇಶ್, ಪ್ರೇಮರಾಜ್, ತಾಲೂಕು ಪ್ರಧಾನ ಕಾರ್ಯದರ್ಶಿ ಹೆಜ್ಜೆಗೆ ಪ್ರಕಾಶ್, ಯುವ ಘಟಕದ ಕಾರ್ಯದರ್ಶಿ ಹುಣಸನಾಳು ಮಹೇಶ್, ಪ್ರತಾಪ್ ಸೇರಿದಂತೆ ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.