ಬೆಳಗಾವಿ: ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಸೋಮವಾರ ನಗರದ ಡಿಸಿ ಕಚೇರಿ ಆವರಣದಲ್ಲಿ ನೇಗಿಲ ಯೋಗಿ ರೈತ ಸೇವಾ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟಿಸಿ, ಬಳಿಕ ಅಪರ ಡಿಸಿ ಅಶೋಕ ದುಡಗುಂಟಿಗೆ ಮನವಿ ಸಲ್ಲಿಸಿದರು.
ಎಂ.ಕೆ.ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಚುನಾವಣೆ ನಡೆಸದೆ ಜಿಲ್ಲಾಡಳಿತದ ಸುಪರ್ದಿಗೆ ತೆಗೆದುಕೊಂಡು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು. ಕಾರ್ಖಾನೆ ಆಡಳಿತ ಮಂಡಳಿಗೆ ಚುನಾವಣೆ ನಡೆಸುತ್ತಿದ್ದು, ಹಿಂದೆ ಇದ್ದ ನಿರ್ದೇಶಕರು ಕೆಲಸ ಮಾಡದೆ ರೈತರ ಬಾಕಿ ಹಣ ನೀಡಲು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಕಷ್ಟದ ಸಮಯದಲ್ಲಿ ಸಕ್ಕರೆ ಕಾರ್ಖಾನೆ ನಡೆಸುವುದು ಅವಶ್ಯಕತೆ ಇರಲಿಲ್ಲ. ಚುನಾಯಿತ ಆಡಳಿತ ಮಂಡಳಿಯ ನಿರ್ದೇಶಕರ ತಪ್ಪಿನಿಂದಲೇ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಡಲು ಮುಂದಾಗುತ್ತಿದ್ದಾರೆ. ತಕ್ಷಣ ಕಾರ್ಖಾನೆಯನ್ನು ಜಿಲ್ಲಾಡಳಿತದ ಸುಪರ್ಧಿಗೆ ತೆಗೆದುಕೊಂಡು ಮುಖ್ಯಮಂತ್ರಿಗಳಿಂದ ನೆರವು ಪಡೆದು ಬಾಕಿ ಬಿಲ್ ಜಮಾ ಮಾಡಿಸಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರಿಗೆ ಆಗುವ ಅನಾಹುತಗಳಿಗೆ ನೇರವಾಗಿ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಧರ್ಮರಾಜ ಗೌಡರ, ಆರ್.ಬಿ. ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷಿ ವಿಧಿಸಿ: ಉತ್ತರ ಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತಗೆ ನ್ಯಾಯಕ್ಕಾಗಿ ಆಗ್ರಹಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಸೋಮವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿ, ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಮತ್ತು ದುಷ್ಕರ್ಮಿಗಳನ್ನು ರಕ್ಷಣೆ ನೀಡುವ ಉದ್ದೇಶದಿಂದಲೇ ಉತ್ತರ ಪ್ರದೇಶದ ಪೊಲೀಸರು ಯುವತಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಅಂತ್ಯಕ್ರಿಯೆಗೆ ಕುಟುಂಬ ಸದಸ್ಯರನ್ನು ದೂರು ಇಟ್ಟಿರುವುದು ಸರಿಯಾದುದಲ್ಲ. ತಕ್ಷಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೂಪಾ ದೇಸಾಯಿ, ಪೈಜ್ಜಲ್ ಅಹ್ಮದ ಶೇಖ್, ಕೆ.ಜಿ.ಪಾಟೀಲ, ಬಾಹುಬಲಿ ಪಾಯಪ್ಪನವರ, ರಾಜು ಪಾಟೀಲ, ಸಂಧ್ಯಾ ಪಾಟೀಲ, ಸದಾನಂದ ಪಾಟೀಲ, ಅಶೋಕ ನಾಯಿಕ, ತುಕಾರಾಮ ಕಾಂಬಳೆ, ಅಪ್ಪಾಸಾಹೇಬ್ ನಾಯಿಕ ಮತ್ತಿತರರು ಉಪಸ್ಥಿತರಿದ್ದರು.