ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರು ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಜಿಲ್ಲಾಡಳಿತ ಭವನಕ್ಕೆ ರೈತರ ಮುತ್ತಿಗೆ - ಫಲವತ್ತಾದ ಭೂಮಿ ಸ್ವಾಧೀನ ಏಕೆ?

ಬಾಗಲಕೋಟೆ: ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಸ್ಥಾಪನೆಗಳ ಹೆಸರಿನಲ್ಲಿ ಜೀವನಕ್ಕೆ ಆಧಾರವಾಗಿರುವ ಫಲವತ್ತಾದ ಭೂಮಿ ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ರೈತರು ಜಿಲ್ಲಾಡಳಿತ ಭವನಕ್ಕೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನವನಗರದ ಎಪಿಎಂಸಿ ಸರ್ಕಲ್ದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಹೋರಾಟ ನಡೆಸಿದ ಗ್ರಾಮದ 500 ಕ್ಕೂ ಹೆಚ್ಚು ರೈತರು ಸಚಿವ ಮುರುಗೇಶ ನಿರಾಣಿ ಹಾಗೂ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಅಂದಾಜು 5 ಸಾವಿರ ಜನಸಂಖ್ಯೆ ಇರುವ ಹಲಕುರ್ಕಿ ಗ್ರಾಮದಲ್ಲಿ 3 ಸಾವಿರ ಎಕರೆ ಜಮೀನು ಇದೆ. ಇದು ಸಂಪೂರ್ಣವಾಗಿ ಲವತ್ತತೆಯಿಂದ ಕೂಡಿ ಜನತೆಯ ಬದುಕಿಗೆ ಆಸರೆಯಾಗಿದೆ. ಸಚಿವ ಮುರುಗೇಶ ನಿರಾಣಿ ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಸ್ಥಾಪನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ಗ್ರಾಮದ ರೈತರು ವರ್ಷಕ್ಕೆ ಎರಡು ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಈ ಭೂಮಿ ವಶಕ್ಕೆ ಪಡೆದರೆ ಶೇ.60 ರಷ್ಟು ಕುಟುಂಬಗಳು ಬೀದಿ ಪಾಲಾಗುತ್ತವೆ. ಇನ್ನು ಗ್ರಾಮಕ್ಕೆ ಸಚಿವರು, ಕಂದಾಯ ಇಲಾಖೆ ಅಧಿಕಾರಿಗಳು, ಕೈಗಾರಿಕಾ ಇಲಾಖೆ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು ಭೇಟಿ ನೀಡಿಲ್ಲ. ರೈತರ ಅಭಿಪ್ರಾಯ ಕೇಳಿಲ್ಲ, ಗ್ರಾಮಸಭೆ ನಡೆಸದೆ ಏಕಾಏಕಿ 1500 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ರೈತ ಸಮೂಹವನ್ನು ಬೀದಿ ಪಾಲು ಮಾಡಲು ಹೊರಟಿರುವ ಧೋರಣೆ ಖಂಡನೀಯ. ಕೂಡಲೇ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಭೂಸ್ವಾಧೀನ ಕ್ರಮಕ್ಕೆ ತಡೆ ಹಿಡಿದು ರೈತರ ಹಿತಾಸಕ್ತಿ ಕಾಪಾಡಬೇಕು. ಇಲ್ಲವಾದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಲಕುರ್ಕಿ ಗ್ರಾಮದ ದಿಂಗಬರೇಶ್ವರ ಮಠದ ಷಡಕ್ಷರ ಸ್ವಾಮಿ ಅವಧೂತರು, ಬಿ.ಪಿ.ನಾಯ್ಕರ, ಆರ್.ಎ್. ನಾಯ್ಕರ, ಚನ್ನಪ್ಪ ಜೋಲಿ, ಕೆ.ಎನ್. ನಾಯ್ಕರ, ಶಂಕ್ರಪ್ಪ ನಾಯ್ಕರ, ಆರ್.ಡಿ. ನಾಯ್ಕರ, ವೈ.ಎಸ್. ಮುಷ್ಠಿಗೇರಿ, ಪಿ.ಆರ್.ಮಾದರ, ಎಂ.ಪಿ.ಮಾದರ ಇತರರು ಇದ್ದರು.