ಚಾಮರಾಜನಗರ: ಮಳೆಯಾಶ್ರೀತ ಪ್ರದೇಶದ ರೈತರು ಮುಖ್ಯ ಬೆಳೆಯೊಂದಿಗೆ ಸುಮಾರು ಏಳು ವಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ನಷ್ಟದಿಂದ ಪಾರಾಗಬಹುದು ಎಂದು ಇಕ್ರಾ ಸಂಸ್ಥೆಯ ಕಾರ್ಯಕರ್ತ ಶಿವಲಿಂಗೇಗೌಡ ಸಲಹೆ ನೀಡಿದರು.
ತಾಲೂಕಿನ ಪಣ್ಯದಹುಂಡಿ ಗ್ರಾಮದ ಸಮುದಾಯ ಭವನದಲ್ಲಿ ಇಕ್ರಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಳೆಯಾಶ್ರೀತ ರೈತರಿಗೆ ಬಿತ್ತನೆ ಪೂರ್ವಕ್ಕೂ ಮುಂಚಿತವಾಗಿ ಕಣ್ಮರೆಯಾದ ನಾಡ ತಳಿ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲೇ ನಾಡ ತಳಿಯನ್ನು ಮರುಸ್ಥಾಪನೆ ಮಾಡಲಾಗುತ್ತಿದೆ. ನಾಡ ತಳಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇಕ್ರಾ ಸಂಸ್ಥೆಯ ವತಿಯಿಂದ ಕಳೆದ 3-4 ವರ್ಷಗಳಿಂದಲೂ ಬಿತ್ತನೆ ಬೀಜಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ರೈತರಿಗೆ ಈ ಸಾಲಿನಲ್ಲಿ ಹಲಸಂದೆ, ತೊಗರಿ ಮತ್ತು ಜೋಳದ ಬೀಜಗಳನ್ನು ವಿತರಣೆ ಮಾಡಲಾಗಿದೆ. ರೈತರು ಮುಖ್ಯ ಬೆಳೆಯ ಜತೆಗೆ 7ವಿಶ್ರ ಬೆಳೆಗಳನ್ನು ಹಾಕಿದರೇ, ರೈತರಿಗೆ ನಷ್ಟವಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇದರಿಂದ ಮಣ್ಣು ಫಲವತ್ತತೆ ಹೆಚ್ಚುವ ಜತೆಗೆ ಆಹಾರ ಭದ್ರತೆಯೂ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸುಮಾರು ಎಂಟು ಬಗೆಯ ಬೀಜಗಳನ್ನು ಬಳ್ಳಾರಿ ಮೂಲದಿಂದ ತರಿಸಿ ಜಿಲ್ಲೆಯ ರೈತರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುತ್ತಿಗೆ, ಮೇಗಲಹುಂಡಿ, ಮಲ್ಲಯ್ಯನ ಪುರ, ಕಲ್ಪುರ, ಹೆಗ್ಗೋಠಾರ, ಮರಳ್ಳಿಪುರ, ಮೇಲಾಜಿಪುರ ಹಾಗೂ ಇನ್ನಿತರೆ ಮಳೆಯಾಶ್ರೀತ ಭಾಗದ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಇಕ್ರಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಬಾಬು, ಗಾಯಿತ್ರಿ, ಹೆಗ್ಗೋಠಾರ ಗುರು ಮಲ್ಲಪ್ಪ ಹಾಗೂ ರೈತ ಮುಖಂಡರು ಹಾಜರಿದ್ದರು.