ಬೀಳಗಿ: ರೈತರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ಉಪಕೇಂದ್ರ ಆರಂಭಿಸಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಸುನಗ ಗ್ರಾಮದ ಹತ್ತಿರ ಗುರುವಾರ 110-11 ಕೆವಿ ವಿದ್ಯುತ್ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈ ಉಪಕೇಂದ್ರದಿಂದ ಸುನಗ ತಾಂಡಾ 1 ಮತ್ತು 2, ಜಾನಮಟ್ಟಿ, ಬೂದಿಹಾಳ ಮತ್ತು ಕವಳ್ಳಿ ಗ್ರಾಮಗಳು ಸೇರಿ ಅನೇಕ ಹಳ್ಳಿಗಳಿಗೆ ವಿದ್ಯುತ್ ಸರಬುರಾಜು ಆಗಲಿದೆ. ರೈತರು ಸೋಲಾರ ಪಂಪ್‌ಸೆಟ್ ಅಳವಡಿಕೆಗೆ ಒತ್ತು ನೀಡಬೇಕು ಎಂದರು.
ಹಿರೇಶೆಲ್ಲಿಕೇರಿ, ಅಮಲಝೇರಿ ಹಾಗೂ ಹುಲಗೇರಿ ಗ್ರಾಮಗಳ ಹತ್ತಿರ ನೂತನ ವಿದ್ಯುತ್ ಉಪಕೇಂದ್ರ ಮಂಜೂರಾಗಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ. ಅನಗವಾಡಿ-ಬೂದಿಹಾಳ ರಸ್ತೆ ಜತೆಗೆ ಬ್ರೀಜ್ ನಿರ್ಮಾಣ ಕ್ರಮವಹಿಸಲಾಗುವುದು ಎಂದರು.
ಬಾಗಲಕೋಟೆ ಪ್ರಸರಣ ವಿಭಾಗದ ಮುಖ್ಯ ಇಂಜಿನಿಯರ್ ಗುರುನಾಥ ಗೊಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಗ ಗ್ರಾಪಂ ಅಧ್ಯಕ್ಷೆ ಪವಿತ್ರಾ ಬಸಪ್ಪ ದಳವಾಯಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಸಿಪಿಐ ಎಚ್.ಬಿ.ಸಣಮನಿ, ಅಧೀಕ್ಷಕಕ ಇಂಜಿನೀಯರ್ ರಮೇಶ ಪವಾರ, ಕಾರ್ಯನಿರ್ವಾಹಕ ಇಂಜಿನೀಯರ್ ಸಚಿನ ಬೂದಿ, ಬೀಳಗಿ ಹೆಸ್ಕಾಂ ಎಇಇ ಮಂಜುನಾಥ ಬೋಕಿ, ಮಹಾಂತೇಶ, ಸುರೇಶ ಹಳ್ಳಿ ಇದ್ದರು.