ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ, ಕಾವೇರಿ ಆರತಿಗೆ ರೈತರ ವಿರೋಧವಿದೆ. ಆದ್ದರಿಂದ ಜಿಲ್ಲೆಯ ಬೇರೆ ಸ್ಥಳಗಳಲ್ಲಿ ಯೋಜನೆ ಅನುಷ್ಠಾನಗೊಳಿಸಿ ಎಂದು ರೈತಪರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ತಿಳಿಸಿದರು.
ಈ ಎರಡು ಯೋಜನೆಯಿಂದ ಅಣೆಕಟ್ಟೆಗೆ ತೊಂದರೆಯಾಗಲಿದೆ. ಆದ್ದರಿಂದ ಭದ್ರತೆಯ ದೃಷ್ಟಿಯಿಂದ ಜಿಲ್ಲೆಯ ಬೇರೆ ಸ್ಥಳಗಳಲ್ಲಿ ಮಾಡುವುದು ಸೂಕ್ತ. ಕಾವೇರಿ ಆರತಿಗೆ ನಮ್ಮ ವಿರೋಧವಿಲ್ಲ. ಅದನ್ನು ಕಾವೇರಿ ನದಿ ಹರಿಯುವ ಯಾವುದೇ ಭಾಗದಲ್ಲಿಯಾದರೂ ಮಾಡಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರವು ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಲು ಹಠ ತೊಟ್ಟಿರುವುದು ದುರುದ್ದೇಶ ಪೂರಿತವಾಗಿದೆ. ಇದನ್ನು ಕೈಬಿಟ್ಟು ಕೇಂದ್ರ ಸರ್ಕಾರದ ಜತೆಗೂಡಿ ಜಿಲ್ಲೆಯಲ್ಲಿ ದೊಡ್ಡ ಕಾರ್ಖಾನೆಯನ್ನು ಆರಂಭಿಸಲಿ. ಈ ಮೂಲಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗುವಂತೆ ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಮಹೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಸ್.ರಾಜುಗೌಡ, ತಿಮ್ಮೇಗೌಡ, ಮೋಹನ್‌ಗೌಡ ಇದ್ದರು.