ಜಿಲ್ಲೆ

ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಯಾಗಲಿ: ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ವ್ಯವಸಾಯಕ್ಕೆ ಹೆಚ್ಚು ಖರ್ಚಾಗುತ್ತಿದ್ದು, ಲಾಭದ ಸಮೀಕರಣದಲ್ಲಿ ರೈತರ ಬೆಳೆಯ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯ ಖಾತ್ರಿ ಕಾನೂನು ಜಾರಿಯಾಗಬೇಕು ಎಂದು ರೈತ ಸಂಘ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.

ರೈತರ ಆರ್ಥಿಕ ಸುಧಾರಣೆಯು ಕೃಷಿ ಅವಲಂಬಿತವಾಗಿದೆ. ಆದರೆ ಇತ್ತೀಚೆಗೆ ಕೃಷಿ ತ್ಯಜಿಸಿ ಜೀವನೋಪಾಯಕ್ಕಾಗಿ ಬೆಂಗಳೂರಿನೆಡೆಗೆ ಮುಖ ಮಾಡುವವರ ರೈತರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಪ್ಪಿಸಲು ಕೃಷಿ ಕಾಳಜಿಯುಳ್ಳವರಾಗಿ ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಮನವೊಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸ್ವಾಮಿನಾಥನ್ ವರಧಿ ಆಧರಿಸಿ ಬೆಂಬಲ ಬೆಲೆ ನಿಗದಿಯಾಗಬೇಕು. ಕೃಷಿ ಉಪಕರಣ, ಯಂತ್ರೋಪಕರಣ, ರಸಗೊಬ್ಬರ, ಕೀಟನಾಶಕಗಳ ಮೇಲಿನ ಜಿಎಸ್‌ಟಿ ರುದ್ದುಗೊಳಿಸಿ ಹಾಗೂ ರೈತರಿಗೆ ನೀಡುವ ರಿಯಾಯಿತಿ, ಸಬ್ಸಿಡಿ ಪ್ರಕಟಣೆಗೂ ಮೊದಲೇ ಉಪಕರಣಗಳ ಬೆಲೆ ಖಾತರಿಯಾಗಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ವಿತರಣಾ ನೀತಿಯಲ್ಲಿ ಬದಲಾವಣೆ ತಂದು, ವ್ಯವಸಾಯ ಭೂಮಿಯ ಮಾರುಕಟ್ಟೆ ದರ ಆಧರಿಸಿ ಪ್ರತಿ ಎಕರೆಗೆ ಕನಿಷ್ಟ 5 ಲಕ್ಷ ರೂನಿಂದ 10 ಲಕ್ಷ ರೂವರೆಗೆ ಬಡ್ಡಿ ರಹಿತ ಸಾಲ ಒದಗಿಸುವಂತಾಗಬೇಕು. ಸಿಬಿಲ್ ಹೊರತುಪಡಿಸಿ, ಸುಲಭ ಸಾಲ ನೀತಿ ಜಾರಿ ರೈತರ ಕೃಷಿ ಸಾಲ ಸಂರ್ಪೂಣ ಮನ್ನಾ, ರಾಷ್ಟ್ರವ್ಯಾಪಿ ಒಂದೇ ಮಾನದಂಡದಲ್ಲಿ ಕಬ್ಬಿನ ಎಫ್‌ಆರ್‌ಪಿ ದರ ನಿಗದಿ ಮಾಡಬೇಕು. ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗುವ 6 ಸಾವಿರ ರೂಗಳನ್ನು 15 ಸಾವಿರ ರೂ.ಗೆ ಹೆಚ್ಚಿಸಬೇಕು. ಬೆಳೆ ಪರಿಹಾರವನ್ನು ನೀಡುವ ವೇಳೆ ಸಂಪೂರ್ಣ ನಷ್ಟ ಪರಿಹಾರ ವಿತರಿಸುವಂತೆ ಒತ್ತಡ ಹಾಕಬೇಕು. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಮನವರಿಕೆ ಮಾಡಿಕೊಟ್ಟು, ಎಲ್ಲ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ಮಾಧ್ಯಮ ಕಾರ್ಯದರ್ಶಿ ಸೊ.ಶಿ.ಪ್ರಕಾಶ್, ತೇಜಸ್, ಸಿದ್ದೇಗೌಡ ಇದ್ದರು.