ಜಿಲ್ಲೆ

ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರಕ್ಕೆ ಒತ್ತಾಯ

Shivamogga

ಶಿವಮೊಗ್ಗ: ಸರ್ಕಾರ ತಕ್ಷಣವೇ ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿ ನ.5ರ ಬೆಳಗ್ಗೆ 11ಕ್ಕೆ ನಗರದ ಎಂಆರ್​ಎಸ್ ವೃತ್ತದಲ್ಲಿ ಹೆದ್ದಾರಿ ತಡೆ ಮಾಡಲಾಗುವುದು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈಗ ಕಟಾವಿಗೆ ಬಂದಿದೆ. ರೈತರ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದೆ. ಆದರೆ ಮೆಕ್ಕೆಜೋಳ ಬೆಲೆ ತೀರಾ ಕುಸಿದಿರುವುದರಿಂದ ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೆಕ್ಕೆಜೋಳಕ್ಕೆ ಕ್ವಿಂಟಾಲ್​ಗೆ 1,850 ರೂ. ಕನಿಷ್ಠ ಬೆಂಬಲ ಬೆಲೆ ಘೊಷಿಸಿರುವುದು ಅವೈಜ್ಞಾನಿಕ. ಕನಿಷ್ಠ 3 ಸಾವಿರ ರೂ. ಬೆಂಬಲ ಬೆಲೆ ಘೊಷಿಸಬೇಕು. ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡುವುದು ಅಪರಾಧ ಎಂದು ಪಂಜಾಬ್ ಸರ್ಕಾರ ಕಾನೂನು ತಂದಿದೆ. ಕರ್ನಾಟಕದಲ್ಲೂ ಈ ಕಾನೂನು ಜಾರಿಯಾಗಬೇಕು. ಕೇರಳ ಸರ್ಕಾರ ತರಕಾರಿ ಬೆಳೆಗಳಿಗೆ ಬೆಲೆ ನಿಗದಿ ಮಾಡಿದಂತೆ ಇಲ್ಲಿಯೂ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಕಾರ್ಯಾಧ್ಯಕ್ಷ ಡಿ.ಎಚ್.ರಾಮಚಂದ್ರಪ್ಪ, ಪ್ರಮುಖರಾದ ಪಿ.ಡಿ. ಮಂಜಪ್ಪ, ಕೆ.ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.