ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ನಡೆಯುತ್ತಿರುವ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದೆ. ನಮಗೆ ಕನ್ನಡ ಪಕ್ಷ, ಪ್ರಾಂತ ರೈತ ಸಂಘ ಸೇರಿ ತಾಲೂಕಿನ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ಪರವಾದ ಸಂಸ್ಥೆಯಾದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ರೈತ ಸಂಘದಿಂದ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀಮಾರ್ನಿಸಲಾಗಿದೆ. ಇದುವರೆಗೆ ಯಾವುದೇ ತರಹದ ಚುನಾವಣೆಗೆ ಸಂಘದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಿರಲಿಲ್ಲ. ರೈತ ಸಂಸ್ಥೆಯಾದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನ.2 ರಂದು ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲು ಕ್ಷೇತ್ರದಿಂದ ತಿಪ್ಪೂರಿನ ತಿಮ್ಮಣ್ಣ ಅವರನ್ನು ಏಕೈಕ ಅಭ್ಯರ್ಥಿಯಾಗಿ ರೈತ ಸಂಘದಿಂದ ಕಣಕ್ಕೆ ಇಳಿಸಲಾಗಿದೆ ಎಂದರು.‘
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಚಂದ್ರತೇಜಸ್ವಿ ಮಾತನಾಡಿ, ಸಹಕಾರಿ ಕ್ಷೇತ್ರ ಉಳಿಸುವ ಕೆಲಸ ಆಗಬೇಕಿದೆ. ಸಹಕಾರಿ ಕ್ಷೇತ್ರ ಬಲಪಡಿಸಲು ರೈತ ಸಂಘದ ಅಭ್ಯರ್ಥಿಗೆ ನಾವು ಬೆಂಬಲ ಸೂಚಿಸುತ್ತಿದ್ದೇವೆ ಎಂದರು. ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್ ಮಾತನಾಡಿ, 25 ರಂದು ನೆಲದಾಂಜನೇಯಸ್ವಾಮಿ ದೇಗುಲದಿಂದ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸಲಾಗುವುದು. ರೈತರ ಮೇಲೆ ರಾಜಕೀಯ ನಾಯಕರುಗಳಿಗೆ ನಿಜವಾದ ಕಾಳಜಿ ಇದ್ದರೆ ರಾಜಕೀಯ ಪಕ್ಷಗಳು ಎಸ್ಟಿ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಸ್ಪರ್ಧಿಸದೆರೈತ ಸಂಘಟನೆಗೆ ಬೆಂಬಲ ಸೂಚಿಸಬೇಕು ಎಂದು ಆಗ್ರಹಿಸಿದರು. ಅಭ್ಯರ್ಥಿ ತಿಮ್ಮಣ್ಣ ಮಾತನಾಡಿ, ನಾನು ವ್ಯಕ್ತಿಯಾಗಿ ಚುನಾವಣೆಗೆ ಬಂದಿಲ್ಲ. ರೈತ ಸಂಘದ ಪ್ರತಿನಿಧಿಯಾಗಿ ಬಂದಿದ್ದೇನೆ. ರೈತ ಸಂಘಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.