ಜಿಲ್ಲೆ

ರೈತ ಸಂಘದಿಂದ ರಸ್ತೆ ಸಂಚಾರ ತಡೆ

ಹನೂರು: ಕಾಡುಪ್ರಾಣಿಗಳ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿ ಲೊಕ್ಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದಲೂ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬಿಆರ್‌ಟಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ಗಳು ಆಗಮಿಸದ ಕಾರಣ ಬುಧವಾರ ಹನೂರಿನಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಮಲೆಮಹದೇಶ್ವರ ಬೆಟ್ಟದ ಮುಖ್ಯರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಒಡೆಯರಪಾಳ್ಯ, ಪಿ.ಜಿ.ಪಾಳ್ಯ, ಬೋರೆದೊಡ್ಡಿ, ಬೂದಿಪಡಗ, ಆಂಡಿಪಾಳ್ಯ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಜಮೀನಿಗೆ ನುಗ್ಗಿ ಫಸಲನ್ನು ಹಾಳು ಮಾಡುತ್ತಿವೆ. ಹೀಗಾಗಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಬೇಕೆಂದು ಆಗ್ರಹಿಸಿ ಕಳೆದ 3 ದಿನಗಳಿಂದಲೂ ಲೊಕ್ಕನಹಳ್ಳಿ ಗ್ರಾಮದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬಿಆರ್‌ಟಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಗಿದೆ. ಆದರೂ ಅಧಿಕಾರಿಗಳು ಆಗಮಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇತ್ತ ಸ್ಥಳೀಯ ಶಾಸಕರು ಸಹ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಫೆ.10ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಗಡಿನಾಡು ಉತ್ಸವ ನಡೆಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಚಿಕ್ಕರಾಜು, ನವೀನ್‌ಕುಮಾರ್, ರಾಜು, ಶ್ರೀನಿವಾಸ್, ಕೃಷ್ಣ ಇನ್ನಿತರರು ಇದ್ದರು.