ಜಿಲ್ಲೆ

ರೈತರನ್ನಾವರಿಸಿದೆ ಬರದ ಛಾಯೆ

ವಿನಯ ಹೆಗಡೆ

ಕುಂದಗೋಳ: ಕಳೆದ ಎರಡು ಮೂರು ವರ್ಷಗಳಿಂದ ಹವಾಮಾನ ವೈಪರಿತ್ಯದಿಂದ ತತ್ತರಿಸಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಈ ವರ್ಷ ಬರ ಆವರಿಸಿದೆ.

ತಾಲೂಕಿನಲ್ಲಿ 4500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದು, 10330ಹೆಕ್ಟೇರ್​ನಲ್ಲಿ ಬಿಟಿಹತ್ತಿ, 9100ಹೆಕ್ಟೇರ್ ಶೇಂಗಾ ಹಾಗೂ 7700 ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆ ಮಾಡಲಾಗಿದ್ದು ಒಟ್ಟಾರೆ ಶೇ. 98 ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ.

ಮಳೆ ಕಡಿಮೆ: ಆಗಸ್ಟ್ ತಿಂಗಳಿನಲ್ಲಿ ತಾಲೂಕಿನಲ್ಲಿ 85 ಮಿಮೀ. ವಾಡಿಕೆ ಮಳೆ ಆಗಬೇಕಿತ್ತು ಆದರೆ 66 ಮಿಮೀ ಮಾತ್ರ ಮಳೆ ಆಗಿದ್ದು ಶೇ. 22ರಷ್ಟು ಮಳೆಕೊರತೆ ಎದುರಾಗಿದೆ.

ಬೆಳೆ ಉಳಿಸಿಕೊಳ್ಳಲು ಸಾಹಸ: ಬೆಳೆ ಒಣಗುವುದನ್ನು ಕಂಡ ರೈತರು ಮುಂದೆ ಮಳೆ ಆಗುತ್ತದೆ ಎಂಬ ಭರವಸೆಯಿಂದ ಕೆರೆ ಕಟ್ಟೆಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಬೆಳೆಗೆ ಸಿಂಪಡಣೆ ಮಾಡುತ್ತಿದ್ದಾರೆ.

ಕೆಲವರು ಕೃಷಿಹೊಂಡದಲ್ಲಿರುವ ನೀರನ್ನು ಪಂಪ್​ಸೆಟ್ ಮೂಲಕ ಸಿಂಪಡಣೆ ಮಾಡುತ್ತಿದ್ದಾರೆ. ಆದರೆ ಮುಂದೆ ಮಳೆ ಆಗದಿದ್ದರೆ ಮಾತ್ರ ಬೆಳೆ ನಷ್ಟ ಆಗುವುದರಲ್ಲಿ ಸಂಶಯವಿಲ್ಲ.

ಒಂದುವರೆ ತಿಂಗಳಿಂದ ಮಳೆ ಹೋಗಿ ಬೆಳೆಯೆಲ್ಲ ಒಣಗುತ್ತಿವೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಯತ್ತ ಮಾತ್ರ ದೃಷ್ಟಿ ನೆಟ್ಟಿದ್ದು, ರೈತನ ಕಡೆ ಕಣ್ಣು ತೆರೆದು ನೋಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ರೈತರು ಆತ್ಮಹತ್ಯೆದಾರಿ ಹಿಡಿಯ ಬೇಕಾಗುತ್ತದೆ. | ಗಂಗಾಧರ ಇಂಗಳಳ್ಳಿ ರೈತ
ಸರ್ಕಾರದ ಆದೇಶದಂತೆ ತಾಲೂಕಿನ ಆರು ಗ್ರಾಮಗಳಾದ ಪುರ, ಹಿರೇನೆರ್ತಿ, ಹಿರೇಗುಂಜಳ, ಕೊಡ್ಲಿವಾಡ, ದೇವನೂರ, ಕೊಕನಕುರಟ್ಟಿ ಗ್ರಾಮಗಳಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಜಂಟಿಯಾಗಿ ಶೇಂಗಾ, ಮೆಣಸಿಕಾಯಿ, ಮೆಕ್ಕೆಜೋಳ, ಹತ್ತಿ ಬೆಳೆಗಳ ಹಾನಿ ಕುರಿತು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದು, ಸರ್ಕಾರದ ಆದೇಶದಂತೆ ಮುಂದಿನ ಕ್ರಮ ಕೈಗೊಳುತ್ತೇವೆ. | ಅಶ್ವಿನಿ ಚಡ್ಚನ್ ತಹಸೀಲ್ದಾರ್