ಚಾಮರಾಜನಗರ : ಬಿತ್ತನೆ ಈರುಳ್ಳಿ ಬೆಲೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿರುವುದರಿಂದ ಗುಂಡ್ಲುಪೇಟೆ ತೆರಕಣಾಂಬಿ ಗುರುವಾರದ ಸಂತೆಯಲ್ಲಿ ವ್ಯಾಪಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
ಕಳೆದೊಂದು ತಿಂಗಳಿನಿಂದ ಹಿಂಗಾರು ಹಂಗಾಮಿನ ನಾಟಿ ಮಾಡುವ ಬಿತ್ತನೆ ಸಣ್ಣ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಈ ಈರುಳ್ಳಿಗೆ ಮಧ್ಯವರ್ತಿಗಳು ದರ ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ತಮಿಳುನಾಡಿನಿಂದ ಹೆಚ್ಚಿನ ಈರುಳ್ಳಿ ತಂದು ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಕಳೆದ ಗುರುವಾರದ ಸಂತೆಯಲ್ಲಿ ಈರುಳ್ಳಿ ದರದ ವಿಷಯವಾಗಿ ರೈತರು ಮತ್ತು ಮಾರಾಟಗಾರರ ನಡುವೆ ಜಟಾಪಟಿ ಉಂಟಾಗಿತ್ತು. ತಹಸೀಲ್ದಾರ್ ಸಮನ್ವಯ ಸೂತ್ರ ಎಣೆದು ಈರುಳ್ಳಿ ಗುಣಮಟ್ಟದ ಮೇಲೆ ಪ್ರತಿ ಕ್ವಿಂಟಾಲ್‌ಗೆ 4ರಿಂದ 5 ಸಾವಿರ ರೂ. ಮಾರಾಟ ಮಾಡುವಂತೆ ಇತ್ಯರ್ಥ ಮಾಡಿದ್ದರು.
ಆದರೆ, ಗುರುವಾರ ಬಂದಿದ್ದ ಲಾರಿಗಳನ್ನು ಎಪಿಎಂಸಿ ಒಳಗೆ ಬಿಟ್ಟಿಕೊಳ್ಳಲಿಲ್ಲ. ಹಾಗಾಗಿ, ವ್ಯಾಪಾರಿಗಳು ರಸ್ತೆ ಬದಿಯಲ್ಲೇ ಲಾರಿ ನಿಲ್ಲಿಸಿಕೊಂಡು ಒಂದು ಕ್ವಿಂಟಾಲ್ ಈರುಳ್ಳಿಗೆ 6ರಿಂದ 8 ಸಾವಿರ ರೂ.ವರೆಗೂ ಮಾರಾಟ ಮಾಡುತ್ತಿದ್ದರು.
ಈ ಪ್ರಮಾಣದ ಕೃತಕ ಬೆಲೆ ಏರಿಸಿರುವ ಮಧ್ಯವರ್ತಿಗಳು, ವ್ಯಾಪಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಈ ಬಾರಿ ಯಾವುದೇ ಅಕಾರಿಗಳು ಮಧ್ಯಸ್ಥಿಕೆ ವಹಿಸಿಕೊಳ್ಳದ ಕಾರಣ ಬೆಲೆ ಇಳಿಕೆಯಾಗಲಿಲ್ಲ. ಹಾಗಾಗಿ, ವ್ಯಾಪಾರಿಗಳು ಹೇಳಿದಷ್ಟು ಬೆಲೆಯನ್ನು ನೀಡಿ ರೈತರು ಈರುಳ್ಳಿ ಖರೀದಿಸಿದರು.
ಇನ್ನು ಎರಡು ರಸ್ತೆ ಬದಿಗಳಲ್ಲೂ ಈರುಳ್ಳಿ ತುಂಬಿದ್ದ ಲಾರಿಗಳನ್ನು ನಿಲ್ಲಿಸಿಕೊಂಡಿದ್ದ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೊನೆಗೆ ಹೊಯ್ಸಳ ಪೊಲೀಸರು ವಾಹನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.