ಲಕ್ಷ್ಮೇಶ್ವರ: ಮುಂಗಾರು ಪೂರ್ವ ಆದ ಹದ ಮಳೆಯಿಂದ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಿದೆ. ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ರೈತ ಸಮುದಾಯಕ್ಕೆ ಡಿಎಪಿ ಗೊಬ್ಬರದ ಕೊರತೆ ಎದುರಾಗಿದೆ.
ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಎಲ್ಲ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ಡಿಎಪಿ ದಾಸ್ತಾನಿಲ್ಲ. ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಇದುವರೆಗೂ ಎರಡೂ ತಾಲೂಕು ಸೇರಿ 518 ಟನ್ ಗೊಬ್ಬರ ಮಾರಾಟವಾಗಿದೆ. ರೈತರು ಕರೊನಾ ಭೀತಿ ಲೆಕ್ಕಿಸದೆ ನಸುಕಿನಲ್ಲಿಯೇ ಬಂದು ಅಂಗಡಿಗಳ ಮುಂದೆ ಸರತಿಯಲ್ಲಿ ನಿಲ್ಲುತ್ತಾರೆ. ಗೊಬ್ಬರ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗುತ್ತಿದ್ದಾರೆ.
ಬೇರೆ ಜಿಲ್ಲೆಯ ರೈತರಿಗೆ ಮಾರಾಟ: ಸರ್ಕಾರ ರಸಗೊಬ್ಬರವನ್ನು ಜಿಲ್ಲಾ ಮತ್ತು ತಾಲೂಕುವಾರು ಹಂಚಿಕೆ ಮಾಡಲು ಕ್ರಮ ಕೈಗೊಂಡಿದೆ. ಇಲ್ಲಿನ ಮಾರಾಟಗಾರರು ನೆರೆಯ ಕುಂದಗೋಳ, ಸವಣೂರ ತಾಲೂಕಿನ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಮಾರಾಟ ಮಾಡಿದ್ದಾರೆ. ಬೇರೆ ಜಿಲ್ಲೆಯ ರೈತರಿಗೆ ಮಾರಾಟ ಮಾಡಿರುವ ಕೆಲ ಅಂಗಡಿಗಳ ಪರವಾನಗಿಯನ್ನು ಕೃಷಿ ಅಧಿಕಾರಿಗಳು ರದ್ದು ಮಾಡಿದ್ದಾರೆ. ಇದರಿಂದ ಇನ್ನುಳಿದ ಮಾರಾಟಗಾರರು ಭಯದಿಂದ ಡಿಎಪಿ ಗೊಬ್ಬರ ತರಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆಹಾನಿಯಾಗಿದೆ. ಈ ವರ್ಷ ಉತ್ತಮ ಮಳೆಯಾಗಿ ಬಿತ್ತನೆಗೆ ಪೂರಕ ವಾತಾವರಣವಿದ್ದರೂ ಡಿಎಪಿ ಗೊಬ್ಬರದ ಕೊರತೆ ಕಾಡುತ್ತಿದೆ. ಕರೊನಾ ಭೀತಿ ಲೆಕ್ಕಿಸದೆ ವಾರದಿಂದ ಅಲೆದರೂ ಡಿಎಪಿ ಸಿಗುತ್ತಿಲ್ಲ. ಡಿಎಪಿ ಗೊಬ್ಬರ ಹಾಕಿದರೆ ಮಾತ್ರ ನಮ್ಮ ತಾಲೂಕಿನಲ್ಲಿ ಒಂದಷ್ಟು ಉತ್ತಮ ಇಳುವರಿ ಪಡೆಯಬಹುದಾಗಿದೆ.| ಈರಣ್ಣ ಕೊಡ್ಲಿವಾಡ, ದೇವಪ್ಪ ತೋಟದ, ರೈತರುದುಡ್ಡು ಕೊಟ್ಟರೂ ಸಕಾಲಕ್ಕೆ ಬೀಜ, ಗೊಬ್ಬರ ಸಿಗುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವುದಿಲ್ಲ. ಬೆಂಬಲ ಬೆಲೆಯಡಿ ಮಾರಾಟ ಮಾಡಿದ ಬೆಳೆಗೆ ಮೂರ್ನಾಲ್ಕು ತಿಂಗಳಾದರೂ ಹಣ ಜಮೆಯಾಗುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ತಾಲೂಕಿನ ಶಾಸಕರು ಜೂನ್ 10 ರೊಳಗೆ ತಾಲೂಕಿನ ರೈತರಿಗೆ ಡಿಎಪಿ ಗೊಬ್ಬರ ಲಭಿಸುವಂತೆ ಮಾಡಬೇಕು.| ಚನ್ನಪ್ಪ ಜಗಲಿ, ತಾಪಂ ಮಾಜಿ ಸದಸ್ಯಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿಗೆ 2 ದಿನಗಳಲ್ಲಿ 260 ಟನ್ ಡಿಎಪಿ ಗೊಬ್ಬರ ಬರುತ್ತದೆ. ಲಾಕ್ಡೌನ್ನಿಂದ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಇಷ್ಟು ದಿನ ಹುಬ್ಬಳ್ಳಿಗೆ ದಾಸ್ತಾನು ಬರುತ್ತಿತ್ತು. ಇನ್ನು ಮುಂದೆ ನೇರವಾಗಿ ಗದಗಕ್ಕೆ ಬರುತ್ತದೆ. ಅಲ್ಲದೆ, ಜಿಲ್ಲೆಯ ರೈತರ ಗೊಬ್ಬರದ ಬೇಡಿಕೆ ಮುಗಿದ ಬಳಿಕ ಬೇರೆ ಜಿಲ್ಲೆ ರೈತರಿಗೆ ಗೊಬ್ಬರ ಕೊಡುವಂತೆ ಮಾರಾಟಗಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.| ಮಹೇಶಬಾಬು ಎಚ್.ಎಂ, ಸಹಾಯಕ ಕೃಷಿ ನಿರ್ದೇಶಕ