ಜಿಲ್ಲೆ

ಬದು ನಿರ್ಮಾಣದಲ್ಲಿ ಕೃಷಿಕರು ಬ್ಯುಸಿ

Avinash R

ಪುರುಷೋತ್ತಮ ಪೆರ್ಲ ಕಾಸರಗೋಡು ಕುಂಬ್ಡಾಜೆ ಪಂಚಾಯಿತಿಯ ನೇರಪ್ಪಾಡಿ ಹೊಳೆಗೆ ಅಡ್ಡಲಾಗಿ ಕಟ್ಟ ಕಟ್ಟುವ ಕಾರ್ಯದಲ್ಲಿ ಇಲ್ಲಿನ ಕೃಷಿಕರು ಬ್ಯುಸಿ ಆಗಿದ್ದಾರೆ. ಹೊಳೆಗೆ ಬದು ನಿರ್ಮಾಣ ಮಾಡುವುದರಿಂದ ಕೃಷಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದ್ದು, ಬೇಸಿಗೆ ಕಾಲದಲ್ಲಿ ಕೃಷಿ ಕಾರ್ಯಕ್ಕೆ ಇದೇ ನೀರು ಉಪಯೋಗವಾಗಲಿದೆ. ಒಂದಷ್ಟು ಕೃಷಿಕರು ಒಟ್ಟು ಸೇರಿ ಕಟ್ಟ ನಿರ್ಮಾಣ ಮಾಡಿದರೆ, ಕೆಲವು ಕಡೆ ಒಬ್ಬರು ಅಥವಾ ಇಬ್ಬರು ಖರ್ಚು ಮಾಡಿ ಬದು ನಿರ್ಮಿಸುತ್ತಿದ್ದಾರೆ. ವರ್ಷಗಳ ಹಿಂದೆ ನೇರಪ್ಪಾಡಿ ಹೊಳೆಗೆ ಅಡ್ಡ 25ಕ್ಕೂ ಹೆಚ್ಚು ಕಟ್ಟಗಳನ್ನು ನಿರ್ಮಿಸಲಾಗುತ್ತಿತ್ತು. ಇಂದು ಈ ಸಂಖ್ಯೆ 10ರಿಂದ 12ಕ್ಕೆ ಕುಸಿದಿದೆ. ಕೀರಿಕ್ಕಾಡು, ಓಡಂಗಲ್ಲು, ವಳಕುಂಜ, ಕಳೆಯತ್ತೋಡಿ, ಬೇರ್ಕಡವು, ಕೂಟೆಲು, ಕುದಿಂಗಿಲ, ಬಾಳೆಗದ್ದೆ, ಮಲ್ಲಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಟ್ಟ ನಿರ್ಮಿಸಲಾಗುತ್ತಿದೆ. ನವೆಂಬರ್ ತಿಂಗಳ ಆರಂಭದಲ್ಲೇ ಕಟ್ಟ ಕಟ್ಟುವ ಪ್ರಕ್ರಿಯೆ ಶುರುವಾಗಿ ಇದು ಫೆಬ್ರವರಿ ತಿಂಗಳ ಕೊನೆವರೆಗೂ ನಡೆಯುತ್ತಿರುತ್ತದೆ. ಬೆಳ್ಳೂರು, ಎಣ್ಮಕಜೆ, ಕುಂಬ್ಡಾಜೆ, ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಟ್ಟಗಳನ್ನು ನಿರ್ಮಿಸಲಾಗುತ್ತಿದ್ದರೂ, ಕುಂಬ್ಡಾಜೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕಟ್ಟಗಳು ತಲೆಯೆತ್ತುತ್ತಿದೆ. ಈ ಹಿಂದೆ ಬೆಳ್ಳೂರು ಪಂಚಾಯಿತಿಯಿಂದ ಆರಂಭಗೊಂಡು ಬದಿಯಡ್ಕ ಪಂಚಾಯಿತಿಯ ಪೆರಡಾಲವರೆಗೆ 50ಕ್ಕೂ ಹೆಚ್ಚಿನ ಕಟ್ಟ ನಿರ್ಮಾಣವಾಗುತ್ತಿತ್ತು. ಆದರೆ ಈಗ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನೇರಪ್ಪಾಡಿ ಹೊಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಗಳು ನಿರ್ಮಾಣಗೊಂಡಲ್ಲಿ ಊರಿನ ಜನತೆಗೆ ಬೇಸಿಗೆಯಲ್ಲಿ ನಿಶ್ಚಿಂತೆಯಿಂದ ನೀರು ಬಳಸಿಕೊಳ್ಳುವ ಭಾಗ್ಯ ಲಭಿಸುತ್ತದೆ. ಕಟ್ಟದಲ್ಲಿ ನೀರಿದ್ದಷ್ಟೂ ಕಾಲ ಕೊಳವೆಬಾವಿಗಳ ಅವಶ್ಯಕತೆ ಇರಲ್ಲ ಎಂಬುವುದು ಬಹುತೇಕ ಕೃಷಿಕರ ಅಭಿಪ್ರಾಯ. ನುರಿತ ಕಾರ್ಮಿಕರು ಅಗತ್ಯ ಈ ಕಟ್ಟ ನಿರ್ಮಾಣ ಕಷ್ಟದ ಕೆಲಸವಾಗಿದ್ದು, ಇದನ್ನು ನಿರ್ಮಿಸಲು ನುರಿತ ಕಾರ್ಮಿಕರ ಅಗತ್ಯ ಇದೆ. ಸರ್ಕಾರದ ಧನಸಹಾಯವಿಲ್ಲದೆ ಕೃಷಿಕರು ತಮ್ಮದೇ ಆದ ತಂತ್ರಜ್ಞಾನದಲ್ಲಿ ಕಟ್ಟ ನಿರ್ಮಿಸುತ್ತಿದ್ದಾರೆ.

ನೇರಪ್ಪಾಡಿ ಹೊಳೆಗೆ ಅಲ್ಲಲ್ಲಿ ಕಟ್ಟ ನಿರ್ಮಿಸುವುದರಿಂದ ಹೊಳೆದಡದ ಕೃಷಿಕರಿಗಷ್ಟೇ ಅಲ್ಲದೆ, ಹೊಳೆಯಿಂದ ಎರಡು ಕಿ.ಮೀ ವ್ಯಾಪ್ತಿವರೆಗೂ ನೀರಿನ ಒಳಹರಿವು ಹೆಚ್ಚಾಗುತ್ತದೆ. ಇದರಿಂದ ಕೊಳವೆಬಾವಿ, ತೆರೆದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತಿದೆ. ಈ ಕಟ್ಟ ನಿರ್ಮಾಣಕ್ಕೆ ಸರ್ಕಾರ ಧನಸಹಾಯ ನೀಡದಿರುವುದು ವಿಷಾದನೀಯ. ಕೇಶವ ಶರ್ಮ ನೇರಪ್ಪಾಡಿ, ಕೃಷಿಕ