ಮುಳಗುಂದ: ಇಲ್ಲಿನ ಕೃಷಿ ಸಹಕಾರಿ ಸಂಘಕ್ಕೆ ಗುರುವಾರ ಪೂರೈಕೆ ಆಗಿದ್ದ ಯೂರಿಯಾ ರಸಗೊಬ್ಬರ ಎಲ್ಲರಿಗೂ ಸಮರ್ಪಕವಾಗಿ ಸಿಗದ ಹಿನ್ನೆಲೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದೊಂದು ವಾರದಿಂದ ಈ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಮುಂಗಾರು ಹಂಗಾಮಿನ ಗೋವಿನಜೋಳ, ಶೇಂಗಾ, ಹತ್ತಿ ಹಾಗೂ ಹೆಸರು ಬೆಳೆಗಳಿಗೆ ಹಾಕಲು ಯೂರಿಯಾ ಅಭಾವ ಉಂಟಾಗಿದೆ.
ಸ್ಥಳೀಯ ಅಗ್ರೋ ಕೇಂದ್ರಗಳಿಗೆ ಯೂರಿಯಾ ಪೂರೈಕೆ ಆಗಿಲ್ಲ. ಗುರುವಾರ ಕೇವಲ 400 ಚೀಲ ಬಂದಿದ್ದು, 500ಕ್ಕೂ ಹೆಚ್ಚು ರೈತರು ಖರೀದಿಗೆ ಮುಗಿಬಿದಿದ್ದರು. ಒಬ್ಬರಿಗೆ 2 ಚೀಲದಂತೆ ವಿತರಿಸಲಾಯಿತು. ಆದರೆ, 2-3 ಗಂಟೆ ಸರದಿ ಸಾಲಿನಲ್ಲಿ ಕಾಯ್ದು ನಿಂತಿದ್ದ ನೂರಾರು ರೈತರಿಗೆ ಗೊಬ್ಬರ ಸಿಗದೇ ನಿರಾಸೆ ಆಯಿತು.
ಪಟ್ಟಣಕ್ಕೆ ಸುಮಾರು 200 ಟನ್ ಯೂರಿಯಾ ಅಗತ್ಯವಿದ್ದು, ಈವರೆಗೆ ಅರ್ಧದಷ್ಟು ಪೂರೈಕೆ ಆಗಿಲ್ಲ. ಇದರಿಂದ ಬೆಳೆಗಳ ರಕ್ಷಣೆ ಹೇಗೆ ಸಾಧ್ಯ, ಸತತ ಮಳೆಯಿಂದ ಭೂಮಿ ತೇವವಾಗಿದ್ದು ಬೆಳೆಗಳು ಕುಗ್ಗುತ್ತಿವೆ. ಕೃಷಿ ಇಲಾಖೆ ರಸಗೊಬ್ಬರ ಪೂರೈಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಯೂರಿಯಾ ಪೂರೈಕೆ ಆಗದೇ ಇದ್ದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ರೈತ ವಾಸು ಹರ್ತಿ ಆಕ್ರೋಶ ವ್ಯಕ್ತಪಡಿಸಿದರು.