ಸರಿಯಾಗಿ ರೈತರಿಗೆ ಬೆಳೆ ಪರಿಹಾರ ಜಮೆ ಮಾಡಬೇಕು ಎಂದು ಆಗ್ರಹಿಸಿ ಚಿಕ್ಕತಡಸಿ ಗ್ರಾಮದ ರೈತರು ತಹಸೀಲ್ದಾರ್ ಸುರೇಶ ಚವಲರ ಅವರಿಗೆ ಮನವಿ ಸಲ್ಲಿಸಿದರು. ಕಲ್ಲನಗೌಡ ಪಾಟೀಲ, ಗೂಳಪ್ಪ ಹರನಟ್ಟಿ, ಈರಣ್ಣ ಹರನಟ್ಟಿ, ಅಯ್ಯಪ್ಪ ಜಾರಗಡ್ಡಿ ಇತರರಿದ್ದರು. 
ಜಿಲ್ಲೆ

ರೈತರ ಖಾತೆಗೆ ಪರಿಹಾರ ಮೊತ್ತ ಜಮೆ ಆಗಲಿ

ರಾಘವೇಂದ್ರಗೌಡ ಭೀ ಪಾಟೀಲ್

ರಾಮದುರ್ಗ: ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ತಾಲೂಕನ್ನು ಬರಪೀಡಿತ ಎಂದು ಗುರುತಿಸಿತ್ತು. ಒಂದು ವರ್ಷ ಕಳೆಯುತ್ತ ಬಂದರೂ ಸರ್ಕಾರದಿಂದ ಬೆಳೆ ಪರಿಹಾರ ಜಮೆ ಆಗದಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಚಿಕ್ಕತಡಸಿ ಗ್ರಾಮ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಸುರೇಶ ಚವಲರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಮದುರ್ಗ ತಾಲೂಕು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿತ್ತು. ಅದರ ಭಾಗವಾಗಿ ಬೆಳೆ ಪರಿಹಾರವು ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಪ್ರತಿ ಹೆಕ್ಟೇರ್‌ಗೆ ಎಷ್ಟು ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿಲ್ಲ. ಕಂದಾಯ ಇಲಾಖೆ, ಕಷಿ ಇಲಾಖೆಗೆ ಹೋಗಿ ರೈತರು ಪರಿಹಾರ ಹಣ ಜಮೆಯಾಗಿಲ್ಲ ಎಂದು ಅಳಲು ತೋಡಿಕೊಂಡರೆ ಎ್ಐಡಿ ಅನುಮೋದನೆ/ಸ್ವೀಕತಿ ಆಗಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ , ಚೆಕ್ ಮಾಡಬೇಕು ಎಂದು ರೈತರನ್ನು ವಿವಿಧ ಇಲಾಖೆಗೆ ಅಲೆದಾಡುವಂತೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಹಿಂಗಾರು ಹಂಗಾಮು ಸಂಪೂರ್ಣ ಬರಪೀಡಿತವಾಗಿದೆ. ಮುಂಗಾರು ಬೆಳೆ ಸಹ ಸರಿಯಾಗಿ ಬೆಳೆದಿಲ್ಲ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶೀಘ್ರ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಸುರೇಶ ಚವಲರ, ಈಗಾಗಲೇ ರೈತರ ಸಮಸ್ಯೆ ಪರಿಹಾರ ಹಾಗೂ ದೂರು ಸ್ವೀಕಾರಕ್ಕೆ ಹೆಲ್ಪ್‌ಡೆಸ್ಕ್ ಪ್ರಾರಂಭಿಸಲಾಗಿದೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಚಿಕ್ಕತಡಸಿ ಗ್ರಾಮದ ರೈತರಾದ ಕಲ್ಲನಗೌಡ ಪಾಟೀಲ, ಗೂಳಪ್ಪ ಹರನಟ್ಟಿ, ಈರಣ್ಣ ಹರನಟ್ಟಿ, ಅಯ್ಯಪ್ಪ ಜಾರಗಡ್ಡಿ, ಗೋವಿಂದಪ್ಪ ತಳವಾರ, ಮುತ್ತು ಹರನಟ್ಟಿ, ನಾಗರಾಜ ಹರನಟ್ಟಿ, ಮಹೇಶ ಹರನಟ್ಟಿ, ಮಲ್ಲಿಕಾರ್ಜುನ ರೋಣದ ಸೇರಿ ಇತರರಿದ್ದರು.