ಕೆಂಪಮ್ಮ 
ಜಿಲ್ಲೆ

ಕ್ರಿಮಿನಾಶಕ ಸೇವಿಸಿದ್ದ ರೈತ ಮಹಿಳೆ ಸಾವು

ಮಳವಳ್ಳಿ: ತಮ್ಮಡಹಳ್ಳಿ ಗ್ರಾಮದಲ್ಲಿ ಸಾಲ ಬಾಧೆಯಿಂದ ಬೇಸತ್ತು ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮಹಿಳೆಯೊಬ್ಬರು ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಗ್ರಾಮದ ಕೆಂಪಯ್ಯ ಎಂಬುವರ ಪತ್ನಿ ಕೆಂಪಮ್ಮ(50) ಮೃತ ರೈತ ಮಹಿಳೆ. ಒಂದು ಎಕರೆ ಕೃಷಿ ಜಮೀನು ಹೊಂದಿರುವ ಇವರು, ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸಹಕಾರ ಸಂಘ, ಸ್ತ್ರೀ ಶಕ್ತಿ ಸಂಘ ಹಾಗೂ ಖಾಸಗಿ ಕೈ ಸಾಲ ಸೇರಿದಂತೆ 4 ಲಕ್ಷ ರೂ.ಗೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ನಿರೀಕ್ಷಿತ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೆ ಬೇಸತ್ತ ಕೆಂಪಮ್ಮ ಸೋಮವಾರ ಮಧ್ಯಾಹ್ನ ತಮ್ಮ ಜಮೀನಿನ ಬಳಿ ಕ್ರಿಮಿನಾಶಕ ಕಾಳುಗಳನ್ನು ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಕೂಡಲೇ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಡರಾತ್ರಿ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಈ ಸಂಬಂಧ ಮೃತರ ಪತಿ ಕೆಂಪಯ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ನೀಡಲಾಗಿದೆ.