ಜಿಲ್ಲೆ

ಹಸು ರಕ್ಷಿಸಲು ಹೋದ ರೈತ ವಿದ್ಯುತ್​ ಪ್ರವಹಿಸಿ ಸಾವು

ರಾಮನಗರ: ತಮ್ಮ ಜಮೀನಿನಲ್ಲಿಯೇ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ರೈತರೊಬ್ಬರು ಮೃತಪಟ್ಟಿರುವ ಟನೆ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿ ತೇರುಬೀದಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗೇಶ್​ (45) ಮೃತಪಟ್ಟ ರೈತ. ಸೋಮವಾರ ಬೆಳಿಗ್ಗೆ ತೇರುಬೀದಿ ಸಮೀಪದ ಜಮೀನಿಗೆ ನಾಗೇಶ್​ ತೆರಳಿದ್ದು, ಈ ವೇಳೆ ತುಂಡಾಗಿ ಬಿದ್ದಿರುವ ವಿದ್ಯುತ್​ ತಂತಿಯನ್ನು ಅವರು ಗಮನಿಸಿರಲಿಲ್ಲ. ಆದರೆ ಮುಂದೆ ಹೋಗುತ್ತಿದ್ದ ಹಸು ತುಂಡಾದ ತಂತಿಯನ್ನು ತುಳಿದು ವಿದ್ಯುತ್​ ಪ್ರವಹಿಸಿ ಮೃತಪಟ್ಟಿದೆ. ಈ ವೇಳೆ ಹಸುವನ್ನು ರಕ್ಷಣೆ ಮಾಡಲು ಹೋದ ನಾಗೇಶ್​ ಕೂಡ ವಿದ್ಯುತ್​ ತಗುಲಿ ಸ್ಥದಲ್ಲಿಯೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಕನಕಪುರ ಬೆಸ್ಕಾಂ ಸಹಾಯಕ ಅಭಿಯಂತರ ಕೃಷ್ಣಮೂರ್ತಿ ಹಾಗೂ ಮರಳವಾಡಿ ಬೆಸ್ಕಾಂ ಅಧಿಕಾರಿ ಯಶೋಧ ಹಾಗೂ ಹಾರೋಹಳ್ಳಿ ಸರ್ಕಲ್​ ಇನ್ಸ್​ಪೆಕ್ಟರ್​ ಅರ್ಜುನ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೋಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮೃತನ ಶವವನ್ನು ಮರಣೋತ್ತರ ಪರೀಕ್ಷಗೆ ದಯಾನಂದ ಆಸ್ಪತ್ರೆಗೆ ಸಾಗಿಸಿದ್ದಾರೆ.

ಬೆಸ್ಕಾಂ  ನಿರ್ಲಕ್ಷ್ಯಕ್ಕೆ  ಗ್ರಾಮಸ್ಥರ ಆಕ್ರೋಶ: ಘಟನೆಗೆ ಬೆಸ್ಕಾಂ  ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರೈತರ ಜಮೀನಿನಲ್ಲಿ ಮಳೆಯಿಂದಾಗಿ ವಿದ್ಯುತ್​ ತಂತಿ ತುಂಡಾಗಿ ಬಿದ್ದಿದ್ದರೂ ಅದನ್ನು ಮರು ಜೋಡಣೆ ಮಾಡದೇ ಇರುವುದು ಈ ಸಾವಿಗೆ ಕಾರಣ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಲ್ಲದೇ, ಮನೆಯ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಸಂಸದ ಬೇಟಿ

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್​.ಮಂಜುನಾಥ್​ ಗ್ರಾಮಕ್ಕೆ ತೆರಳಿ ಮೃತ ರೈತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.