ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ತುಮ್ಮಲಹಳ್ಳಿಯಲ್ಲಿ ಜಮೀನಿಲ್ಲಿದ್ದ ಕೇಬಲ್ ವೈರುಗಳನ್ನು ಕದಿಯುತ್ತಿದ್ದ ಇಬ್ಬರು ಪೈಕಿ ಒಬ್ಬನನ್ನು ಮಾಲು ಸಮೇತ ಹಿಡಿದುಕೊಂಡ ರೈತ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಜಮೀನಿನಲ್ಲಿ ಅಪರಿಚಿತರಿಬ್ಬರು ಇರುವುದನ್ನು ಕಂಡು ರೈತ ಆಂಜಪ್ಪ ಸ್ಥಳಕ್ಕೆ ತೆರಳಿದಾಗ ಕೊಳವೆಬಾವಿಗೆ ಅಳವಡಿಸಿದ್ದ ಕೇಬಲ್ ವೈರ್ ಕಳ್ಳತನವಾಗಿರುವುದು ಗೊತ್ತಾಗಿದೆ. ತಕ್ಷಣ ಹಿಡಿಯಲು ಯತ್ನಿಸುತ್ತಿದ್ದಂತೆ ಒಬ್ಬ ಸಿಕ್ಕಿ ಬಿದ್ದಿದ್ದಾನೆ. ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು ಆಂಧ್ರದ ದಿಗವತೊಟ್ಟಿವಾರಪಲ್ಲಿಯ ಲಾರಿ ಚಾಲಕ ಸಾಯಿಕುಮಾರ್, ಕಾನಗಮಾಕಲಹಳ್ಳಿಯ ನರಸಿಂಹ ಕಳ್ಳತನಕ್ಕೆ ಯತ್ನಿಸಿದವರು ಎಂದು ತಿಳಿದು ಬಂದಿದೆ. ಬಟ್ಲಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರೈತರಿಗೆ ಅಪಾರ ನಷ್ಟ
ಲಕ್ಷಾಂತರ ರೂ ಬಂಡವಾಳ ಹೂಡಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿರುವ ರೈತರು ಕೊಳವೆ ಬಾವಿಗೆ ಅಳವಡಿಸಿರುವ ಪಂಪ್ ಸೆಟ್ಟು ಮೋಟಾರುಗಳು, ಕೇಬಲ್ ವೈರುಗಳು ಕಳ್ಳತನದಿಂದ ನಷ್ಟ ಅನುಭವಿಸುತ್ತಿದ್ದಾರೆ. ಖದೀಮರು ಕಗ್ಗತ್ತಲಿನಲ್ಲಿ ಸುತ್ತಲಿನ ಜಮೀನುಗಳಿಗೆ ನುಗ್ಗಿ, ನಯವಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು ರೈತರು ನಿರಂತರವಾಗಿ ತೋಟಗಳ ಬಳಿ ಕಾವಲಿರುವಂತಾಗಿದೆ.