ಜಿಲ್ಲೆ

ಬೇಲಿಮಲ್ಲೂರು ರೈತನ ಕೈಹಿಡಿದ ಟೊಮ್ಯಾಟೊ

ಹರ್ಷ ನ.ಪುರೋಹಿತ

ಹೊನ್ನಾಳಿ: ತಾಲೂಕಿನ ಬೇಲಿಮಲ್ಲೂರು ಗ್ರಾಮದ ರೈತ ರೇವಣಪ್ಪ ತಮ್ಮ 1.06 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದು, ಕೇವಲ 6 ದಿನಗಳಲ್ಲಿ ಬರೋಬ್ಬರಿ 1 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಮೇ ತಿಂಗಳಲ್ಲಿ 25 ದಿನದ 7 ಸಾವಿರ ಸಸಿಗಳನ್ನು ನಾಟಿ ಮಾಡಿಸಿದ್ದರು. ಆ ಸಂದರ್ಭದಲ್ಲಿ ಮಳೆಯ ಕೊರತೆ ಕಂಡು ಬಂದಿದ್ದು, ಬಿಸಿಲಿನ ತಾಪಕ್ಕೆ ನಾಟಿ ಮಾಡಿದ ಸಸಿಗಳು ಕಮರಿದ್ದರಿಂದ ಮತ್ತೆ 6 ಸಾವಿರ ಸಸಿಗಳನ್ನು ನಾಟಿ ಮಾಡಿದ್ದರು.

ಅದಕ್ಕಾಗಿ ಒಟ್ಟು 1.90 ಲಕ್ಷ ರೂ. ಖರ್ಚು ಮಾಡಿದ್ದರು. ಈಗಾಗಲೇ ಐದಾರು ಬಾರಿ ಟೊಮ್ಯಾಟೊ ಹಣ್ಣು ಮಾರಿದ್ದು, ಸುಮಾರು 1 ಲಕ್ಷ ರೂ. ಆದಾಯ ಬಂದಿದೆ.

ಜತೆಗೆ, ಇನ್ನೂ ಒಂದೂವರೆ ತಿಂಗಳ ಕಾಲ ಫಲ ಸಿಗಲಿದೆ. ಇದೇ ದರ ಸಿಕ್ಕರೆ ಹೆಚ್ಚು ಕಡಿಮೆ 10 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೇವಣಪ್ಪ.

ಹೆಚ್ಚಿದ ಕಳ್ಳರ ಕಾಟ
ಏಕಾಏಕಿ ದರ ಹೆಚ್ಚಳವಾಗಿದ್ದರಿಂದ ಕೆಲವರು ಟೊಮ್ಯಾಟೊ ಕದಿಯಲು ಬರುತ್ತಿದ್ದಾರೆ. ಇದರಿಂದ ಬೆಳೆ ರಕ್ಷಣೆ ದೊಡ್ಡ ತಲೆನೋವಾಗಿದೆ. ಹಾಗಾಗಿ, ರೈತರು ರಾತ್ರಿ, ಹಗಲು ತಪ್ಪದೇ ಹೊಲ ಕಾಯುವಂತಾಗಿದೆ.