ಹಿರಿಕರ ರವಿ ಸೋಮವಾರಪೇಟೆ
ಅಕಾಲಿಕ ಮಳೆಯಿಂದ ತಾಲೂಕಿನ ಕೃಷಿಕರು ಫಸಲು ನಷ್ಟದಿಂದ ಸಂಕಷ್ಟದಲ್ಲಿದ್ದಾಗಲೆ, ಕಾಡುಪ್ರಾಣಿಗಳು ನೆಮ್ಮದಿಯನ್ನು ಕಸಿದುಕೊಂಡಿವೆ.
ಮೀಸಲು ಅರಣ್ಯಗಳ ಪಕ್ಕದಲ್ಲಿರುವ ಗ್ರಾಮಗಳಿಗೆ ನುಗ್ಗುವ ಕಾಡುಕೋಣ, ಕಾಡುಹಂದಿಗಳು ಹಿಂಡು ಭತ್ತದ ಪೈರನ್ನು ತಿಂದು ಮುಗಿಸುತ್ತಿವೆ. ಶಾಂತಳ್ಳಿ ಹೋಬಳಿಯ ಕೂತಿ, ತೋಳೂರುಶೆಟ್ಟಳ್ಳಿ, ಯಡೂರು, ಹರಗ, ಕುಂದಳ್ಳಿ, ಬಾಚಳ್ಳಿ, ಮಲ್ಲಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ಕುಡಿಗಾಣ ಮುಂತಾದ ಕಡೆಗಳಲ್ಲಿ ಕಾಟ ಪ್ರಾರಂಭವಾಗಿದೆ.
ಸುಂಟಿಕೊಪ್ಪ ಹೋಬಳಿಯ ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಮಂಕ್ಯಾ ಗ್ರಾಮಗಳಲ್ಲಿ ಕಾಡುಕೋಣ ಕಾಡುಹಂದಿಗಳ ಕಾಟ ಮಿತಿಮೀರಿದೆ. ಮಳೆಗಾಲದಲ್ಲಿ ಹೆಚ್ಚಿನ ಕುಟುಂಬಗಳ ಭತ್ತದ ನಾಟಿ ಕೊಳೆತು ಹೋಗಿತ್ತು. ಉಳಿದ ಪೈರನ್ನು ಕಾಡು ಪ್ರಾಣಿಗಳು ತಿಂದು ಮುಗಿಸುತ್ತಿವೆ. ಕೆಸದಗೆಡ್ಡೆ, ಸಿಹಿಗೆಣಸು, ತರಕಾರಿಗಳು ಕಾಂಡುಹಂದಿಗಳ ಪಾಲಾಗುತ್ತಿವೆ ಎಂದು ಕೃಷಿಕರು ಸಂಕಷ್ಟವನ್ನು ಹೇಳಿ ಕೊಂಡಿದ್ದಾರೆ.
ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯ ನಿಡ್ತ, ಮಾಲಂಬಿ, ಜೇನುಕಲ್ಲುಬೆಟ್ಟ, ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯ ಪಕ್ಕದ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಉಪಟಳ ಮುಂದುವರಿದಿದೆ. ಕಾಡುಕೋಣ, ಕಾಡಾನೆ ಸಂಚಾರದಿಂದ ಕಾಫಿ ತೋಟಗಳಲ್ಲೂ ಹಾನಿಯಾಗುತ್ತಿದೆ. ಕಣಗಾಲು, ಹಿತ್ತಲಗದ್ದೆ, ಕೂಗೂರು, ಚಿಕ್ಕಾರ, ಹಿರಿಕರ, ದೊಡ್ಡಮಳ್ತೆ, ಗಣಗೂರು, ಯಲಕನೂರು, ಹೊಸಳ್ಳಿ, ಅರೇಯೂರು, ಅಬ್ಬೂರು, ಬಾಣಾವಾರ, ಸಿದ್ದಲಿಂಗಪುರ, ಐಗೂರು ಗ್ರಾಮಗಳಲ್ಲಿ ಫಸಲನ್ನು ಕಾಡುಪ್ರಾಣಿಗಳು ಹಾನಿ ಮಾಡುತ್ತಿವೆ.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕೊಪ್ಪ, ಬೇಳೂರು, ಬಸವನಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಳ್ಳು ಹಂದಿಗಳು ಕಾಫಿ ಬೆಳೆಗಾರರ ಬದುಕಿಗೆ ಮುಳ್ಳಾಗಿ ಪರಿಣಮಿಸಿವೆ. ಕಾಳುಮೆಣಸು ಬಳ್ಳಿಗಳನ್ನು ಕಡಿಯುತ್ತಿರುವುದರಿಂದ ಬಳ್ಳಿಗಳು ಒಣಗಿ ಫಸಲು ನಷ್ಟ ಅನುಭವಿಸುವಂತಾಗಿದೆ.
ರಾತ್ರಿ ಸಮಯದಲ್ಲಿ ಕಾಫಿ ತೋಟಗಳಿಗೆ ಮುಳ್ಳು ಹಂದಿಗಳು ಹಿಂಡು ಹಿಂಡಾಗಿ ಬಂದು ಕಾಳು ಮೆಣಸಿನ ಬಳ್ಳಿಗಳ ಕಾಂಡವನ್ನು ತುಂಡರಿಸುತ್ತಿವೆ. ಇದರಿಂದ ಫಸಲಿನ ಬಳ್ಳಿ ಒಣಗುತ್ತಿವೆ. ಹಲವು ತೋಟಗಳಲ್ಲಿ 10 ರಿಂದ 20ವರ್ಷಗಳ ಕಾಳುಮೆಣಸಿನ ಬಳ್ಳಿಗಳು ಒಣಗಿಹೋಗುತ್ತಿವೆ. ಕಾಳು ಮೆಣಸಿನ ಬಳ್ಳಿಗಳನ್ನು ರೋಗಮುಕ್ತವಾಗಿ ಬೆಳೆದು, ಮರದ ಬುಡದಲ್ಲಿ ನೆಟ್ಟು, ಅದನ್ನು ಆರೈಕೆ ಮಾಡಿ, ಫಸಲು ಕೊಯ್ಲು ಮಾಡುವುದಕ್ಕೆ ಹರಸಾಹಸ ಮಾಡಬೇಕು. ಸಾವಿರಾರು ರೂ.ಗಳನ್ನು ಖರ್ಚು ಮಾಡಬೇಕು. ಅಂತಹ ಹತ್ತಿಪ್ಪತ್ತು ವರ್ಷಗಳ ಬಳ್ಳಿಗಳನ್ನು ಒಂದೇ ರಾತ್ರಿಯಲ್ಲಿ ಮುಳ್ಳು ಹಂದಿಗಳು ಹಾಳುಗೆಡುವುತ್ತಿವೆ.