ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ನುಗ್ಗಿದ್ದು ಅದರಲ್ಲೇ ಮಕ್ಕಳು ಶಾಲೆಗೆ ತೆರಳುತ್ತಿರುವುದು.  
ಜಿಲ್ಲೆ

ವಿಜಯಪುರ: ವರುಣನ ಅಬ್ಬರಕ್ಕೆ ಅನ್ನದಾತ ತತ್ತರ

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವ ಗುಡುಗು-ಮಿಂಚು ಸಹಿತ ಭಾರಿ ಮಳೆ ಆಗಿದ್ದು, ವಿಜಯಪುರ ನಗರ ಸೇರಿದಂತೆ ವಿವಿಧೆಡೆ ಜನ ಜೀವನ ಅಸ್ತವ್ಯಸ್ತಗೊಂಡಿತು.

ಮುದ್ದೇಬಿಹಾಳ ತಾಲೂಕಿನ ಚವನಭಾವಿ ಗ್ರಾಮದ ಹಳ್ಳ ಹರಿದು ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು. ಇನ್ನು ದೇವರ ಹಿಪ್ಪರಗಿ ಭಾಗದಲ್ಲಿ ವರುಣನ ಅಬ್ಬರಕ್ಕೆ ಸಾತಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಮಳೆ ನೀರು ನುಗ್ಗಿದ್ದು, ಅದರಲ್ಲೇ ಮಕ್ಕಳು ಖುಷಿಯಿಂದ ಶಾಲೆಗೆ ತೆರಳಿದರು.

ಜಿಲ್ಲೆಯಲ್ಲಿ 12.31 ಮಿ.ಮೀ. ಮಳೆ

ಜಿಲ್ಲೆಯಲ್ಲಿ 12.31 ಮಿ.ಮೀ. ಮಳೆ ಆಗಿದೆ. ಅದರಲ್ಲಿ ಬಸವನ ಬಾಗೇವಾಡಿ 9.5 ಮಿ.ಮೀ, ಮನಗೂಳಿ 4.2, ಆಲಮಟ್ಟಿ2.9,
ಹೂವಿನ ಹಿಪ್ಪರಗಿ 10.8, ಮಟ್ಟಿಹಾಳ 13.0, ವಿಜಯಪುರ 14.4, ನಾಗಠಾಣ 11.2, ಭೂತನಾಳ 64.4, ಹಿಟ್ನಳ್ಳಿ 4.4, ತಿಕೋಟಾ 11.4, ಮಮದಾಪುರ 35.4, ಕುಮಟಗಿ 16.8, ಬಬಲೇಶ್ವರ 4.8, ಇಂಡಿ 17.0, ನಾದ ಬಿ.ಕೆ 11.2, ಅಗರಖೇಡ 10.1, ಹೋರ್ತಿ 26.2, ಹಲಸಂಗಿ 14.0, ಚಡಚಣ 38.0, ಝಳಕಿ 22.2, ಮುದ್ದೇಬಿಹಾಳ 5.3, ನಾಲತವಾಡ 20.0, ಸಿಂದಗಿ 15.8, ಆಲಮೇಲ 7.8, ರಾಮನಹಳ್ಳಿ 6.7, ಕಡ್ಲೆವಾಡ 10.2, ದೇವರಹಿಪ್ಪರಗಿ 44.0, ಕೊಂಡಗೂಳಿ 18.0 ಮಿ.ಮೀ. ಮಳೆ ಆಗಿದೆ.

ಸಂಕಷ್ಟದಲ್ಲಿ ಬೆಳೆಗಾರರು
ಈರುಳ್ಳಿ ಹಾಗೂ ದ್ರಾಕ್ಷಿ ಬೆಳೆಗಾರರು ವರುಣನ ಅಬ್ಬರಕ್ಕೆ ತತ್ತರಿಸಿದ್ದಾರೆ. ಈ ಬಾರಿ ಈರುಳ್ಳಿಗೆ ದರವೂ ಸಿಗದೆ ರೈತರು ಕಂಗಲಾಗಿದ್ದು, ಹೊಲದಲ್ಲೇ ಈರುಳ್ಳಿ ಬೆಳೆ ಕೊಳೆಯುತ್ತಿವೆ. ಇನ್ನು ಹೂ ಕಟ್ಟುವ ಹಂತದಲ್ಲಿರುವ ದ್ರಾಕ್ಷಿ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಹಾಗಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಸಮೀಕ್ಷೆ ಕಾರ್ಯಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಯುತ್ತಿದೆ.

ಹಿಂಗಾರು ಬಿತ್ತನೆ ವಿಳಂಬ
ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರಿನಲ್ಲಿ ಒಟ್ಟು 1.78 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಸತತ ಮಳೆಯಿಂದಾಗಿ ಬಿತ್ತನೆ ವಿಳಂಬವಾಗುತ್ತಿದೆ. ಈಗಾಗಲೇ ಜಿಲ್ಲೆಯ ರೈತರು ಹಿಂಗಾರಿನಲ್ಲಿ ಕಡಲೆ, ಜೋಳ, ಕುಸುಬಿ, ಸೂರ್ಯಕಾಂತಿ ಮತ್ತಿತರ ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ. ಅವರ ಬೇಡಿಕೆಗೆ ತಕ್ಕಂತೆ ಕೃಷಿ ಇಲಾಖೆ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಂಡಿದೆ. ಆದರೆ ವರುಣನ ಅಬ್ಬರಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಟ್ಟು 50,444 ಹೆಕ್ಟೇರ್‌ನಲ್ಲಿ ಜೋಳ, 6546 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 28,500 ಹೆಕ್ಟೇರ್‌ನಲ್ಲಿ ಗೋಧಿ, 80,420 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.