ಜಿಲ್ಲೆ

ಶೀಘ್ರದಲ್ಲೇ ರೈತ ಸೂಪರ್ ಮಾರ್ಕೆಟ್ ಆರಂಭ

ಕಡೂರು: ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ ಹಾಗೂ ರೈತ ಉತ್ಪಾದಕರ ಸಹಕಾರ ಸಂಘದಿಂದ ಶೀಘ್ರದಲ್ಲೇ ಪಟ್ಟಣದಲ್ಲಿ ರೈತ ಸೂಪರ್ ಮಾರ್ಕೆಟ್ ಆರಂಭಿಸಲಾಗುವುದು. ಇದಕ್ಕೆ ಈಗಾಗಲೇ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಳ್ಳೇಕೆರೆ ವಿಶ್ವನಾಥ್ ಹೇಳಿದರು.

ತಾಪಂ ಸಾಮಾರ್ಥ್ಯ ಸೌಧದಲ್ಲಿ ನಡೆದ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಆಹಾರ ಉತ್ಪಾದನೆ ಗುಣಮಟ್ಟತೆ ಕುರಿತು ಕಾರ್ಯಗಾರದಲ್ಲಿ ಮಾತನಾಡಿ, ಇದರಲ್ಲಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ತಮ್ಮಲ್ಲಿನ ಉತ್ಪಾದಿಸುವ ಆಹಾರದ ಸಿರಿಧಾನ್ಯದ ಉತ್ಪನಗಳು ಹಾಗೂ ದಿನಬಳಕೆಯ ಅಗರಬತ್ತಿ, ಕರಕುಶಲ ವಸ್ತುಗಳನ್ನು ರೈತ ಸೂಪರ್ ಮಾರುಕಟ್ಟೆಯಲ್ಲ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದರು.

ತಾಲೂಕಿನಲ್ಲಿ 1,739 ಸಂಜೀವಿನಿ ಸ್ವಸಹಾಯ ಸಂಘಗಳು ರಚನೆಗೊಂಡಿವೆ. ಇದರಲ್ಲಿ 19,307 ಮಹಿಳಾ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಂಜೀವಿನಿ ಒಕ್ಕೂಟದಡಿ 50 ಮಹಿಳಾ ಸ್ವಸಹಾಯ ಸಂಘಗಳು ತಮ್ಮ ದೇಶಿಯ ಆಹಾರ ಉತ್ಪಾದನೆಯಲ್ಲಿ ತೊಡಗಿಸಿಕೊಂಡು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ತಮ್ಮ ಉತ್ನನ್ನಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕ ಬಲವರ್ಧನೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಸಂಜೀವಿನಿ ಸ್ವಸಹಾಯ ಸಂಘಗಳ ಸಂಯೋಜಕ ನಂದನ್ ಮತ್ತು ಸಂಪನ್ಮೂಲ ವ್ಯಕ್ತಿ ಜಯಣ್ಣ ಆಹಾರ ಉತ್ಪಾದನೆಯ ಗುಣಮಟ್ಟ ಕಾಪಾಡುವ ಕುರಿತು ಮಾಹಿತಿ ನೀಡಿದರು. ನಿರಂಜನ್ ಸೇರಿದಂತೆ ನೂರಾರು ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಭಾಗವಹಿಸಿದ್ದರು.